ನವದೆಹಲಿ : ರೈಲ್ವೇ ನಿಲ್ದಾಣದ ಆವರಣದಲ್ಲೇ ವಿದ್ಯುತ್ ಸ್ಪರ್ಶಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ಭಾನುವಾರ ನಡೆದಿದೆ.
ಸಾಕ್ಷಿ ಅಹುಜಾ ಎಂಬ ಮಹಿಳೆ ಭಾನುವಾರ ಬೆಳಿಗ್ಗೆ 5.30 ಕ್ಕೆ ತನ್ನ ಸಹೋದರಿ ಮತ್ತು ಮೂವರು ಮಕ್ಕಳೊಂದಿಗೆ ಭೋಪಾಲ್ ಗೆ ರೈಲು ಹತ್ತಲು ನವದೆಹಲಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಆಗ ಜಲಾವೃತವಾದ ರಸ್ತೆಯನ್ನು ದಾಟುತ್ತಿದ್ದಾಗ ಅವರು ಸಪೋರ್ಟ್ ಗಾಗಿ ವಿದ್ಯುತ್ ಕಂಬವನ್ನು ಹಿಡಿದರು . ಈ ವೇಳೆ ಅವರಿಗೆ ವಿದ್ಯುತ್ ಶಾಕ್ ತಗುಲಿದೆ.ಮಹಿಳೆ ತನ್ನ ಪತಿ ಮತ್ತು ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗುತ್ತಿದ್ದಳು. ಆದರೆ ವಿದ್ಯುತ್ ಸ್ಪರ್ಶದಿಂದ ಆಕೆ ಸಾವನ್ನಪ್ಪಿದ್ದಾಳೆ. ನಿಲ್ದಾಣದ ಆವರಣದಲ್ಲಿ ನೀರು ನಿಂತಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ನಂತರ ಸ್ಥಳಕ್ಕೆ ದೆಹಲಿ ಪೊಲೀಸರು ಆಗಮಿಸಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದರು, ಆದರೆ ಅಲ್ಲಿ ಅವಳು ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಮಹಿಳೆಯ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ.ಇನ್ಸುಲೇಷನ್ ವೈಫಲ್ಯದಿಂದಾಗಿ ಕಂಬದ ಮೇಲಿನ ಕೇಬಲ್ ನಿಂದ ವಿದ್ಯುತ್ ಪ್ರವಹಿಸಿರುವ ಸಂಭವ ಇದೆ ಎಂದು ಪೊಲೀಸರು ಹೇಳಿದರು.