
ಬೆಂಗಳೂರು: 10 ಕೆಜಿ ಉಚಿತ ಅಕ್ಕಿ ನೀಡುವ ವಿಚಾರವಾಗಿ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದೆ. ಹಾಗಾಗಿ ಬೇರೆ ಬೇರೆ ರಾಜ್ಯದ ಜೊತೆ ಮಾತುಕತೆ ನಡೆದಿದೆ. ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿದ್ದೇವೆ. ಹಾಗಾಗಿ ಎಲ್ಲಾ ರೀತಿಯ ಪರ್ಯಾಯ ಮಾರ್ಗಗಳನ್ನು ವಿಚಾರಿಸುತ್ತೇವೆ ಎಂದು ಡಿಸಿಎ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ಕಾಂಗ್ರೆಸ್ ನಾಯಕರಿಗೆ ಮೆದುಳು ಇರಲಿಲ್ವಾ? ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಾವು ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಆದರೆ ಬಿಜೆಪಿಯವರು ಜನರಿಗೆ ನೀಡಿದ ಭರವಸೆಯನ್ನು 5 ವರ್ಷ ಆಡಳಿತ ನಡೆಸಿದ್ರು ಯಾಕೆ ಈಡೇರಿಸಿಲ್ಲ? ಎಂದು ಪ್ರಶ್ನಿಸಿದರು.
ಉದ್ಯೋಗ ಸೃಷ್ಟಿ ಮಾಡ್ತೀವಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಕೊಡ್ತೀವಿ, ಕಪ್ಪು ಹಣ ತರ್ತೀವಿ ಎಂದ್ರು ಯಾಕೆ ಮಾಡಲಿಲ್ಲ ? 5 ವರ್ಷಗಳಲ್ಲಿ ಬಿಜೆಪಿ ಪ್ರಣಾಳಿಕೆಯ ಯಾವ ಅಂಶವನ್ನೂ ಪೂರ್ಣ ಮಾಡಿಲ್ಲ. ನಾವು ಈಗಷ್ಟೇ ಅಧಿಕಾರಕ್ಕೆ ಬಂದಿದ್ದೇವೆ. ಯೋಜನೆಗಳನ್ನು ಜಾರಿಗೆ ತರುತ್ತಲೂ ಇದ್ದೇವೆ. ಅಕ್ಕಿ ವಿಚಾರವಾಗಿ ನಾವು ಯಾರನ್ನೂ ಪುಕ್ಸಟ್ಟೆ ಕೊಡಿ ಎಂದು ಕೇಳಿಲ್ಲ. ನಾವು ಬಿಜೆಪಿಯವರಿಗಿಂತ ವಿಭಿನ್ನವಾಗಿದ್ದೇವೆ. ಯೋಜನೆ ಜಾರಿಗೊಳಿಸುತ್ತೇವೆ ಎಂದು ಹೇಳಿದರು.