ತಮಿಳುನಾಡು ಪೊಲೀಸರು ಮಹಿಳೆಯರ ಸುರಕ್ಷತೆಗಾಗಿ ಹೊಸ ಕ್ರಮ ಕೈಗೊಂಡಿದ್ದು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ನಿರ್ಭೀತಿಯಿಂದ ಮನೆ ತಲುಪಲು ಪೊಲೀಸ್ ಗಸ್ತು ವಾಹನಗಳನ್ನು ಬಳಸಬಹುದು ಎಂದಿದ್ದಾರೆ.
ಚೆನ್ನೈ ನಗರದ ಮಹಿಳೆಯರು ರಾತ್ರಿ 10 ರಿಂದ ಬೆಳಿಗ್ಗೆ 7 ಗಂಟೆಯೊಳಗೆ ಕೆಲಸ ಮುಗಿಸಿ ಹಿಂದಿರುಗಿದರೆ, ಸುರಕ್ಷಿತವಾಗಿ ತಮ್ಮ ನಿವಾಸಕ್ಕೆ ತಲುಪಲು ಪೊಲೀಸ್ ಗಸ್ತು ವಾಹನವನ್ನು ಬಳಸಬಹುದು.
ತಮಿಳುನಾಡು ಪೊಲೀಸರ ಹೊಸ ಯೋಜನೆ – ಮಹಿಳಾ ಸುರಕ್ಷತಾ ಯೋಜನೆಯಡಿ ರಾತ್ರಿಯಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ಈ ಸೌಲಭ್ಯ ಎಲ್ಲಾ ದಿನಗಳಲ್ಲೂ ಲಭ್ಯವಿರಲಿದೆ.
“ರಾತ್ರಿಯಲ್ಲಿ ಅಸುರಕ್ಷಿತ ಮತ್ತು ಸಾರಿಗೆ ಅಗತ್ಯವಿರುವ ಮಹಿಳೆಯರು ಸಹಾಯವಾಣಿ 1091, 112, 044-23452365 ಮತ್ತು 044-28447701 ಅನ್ನು ಡಯಲ್ ಮಾಡಬಹುದು. ಈ ವೇಳೆ ಅವರಿಗೆ ಪೊಲೀಸ್ ಗಸ್ತು ವಾಹನವನ್ನು ಲಭ್ಯಗೊಳಿಸಲಾಗುವುದು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಚ್ಚಿನ ಮಹಿಳೆಯರು ವಿವಿಧ ಪಾಳಿಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಮತ್ತು ಕೆಲವೊಮ್ಮೆ ಕಚೇರಿಯ ವಾಹನದ ಮೂಲಕ ತಮ್ಮ ಮನೆ ಬಳಿ ಡ್ರಾಪ್ ಪಡೆದ ಬಳಿಕ ಅಲ್ಲಿಂದ ಒಬ್ಬಂಟಿಯಾಗಿ ನಡೆದುಕೊಂಡು ಹೋಗಬೇಕಾಗಿರುವುದರಿಂದ ಈ ಯೋಜನೆಯನ್ನು ಪರಿಚಯಿಸಲಾಗಿದೆ.