ಬಿಪರ್‌ಜಾಯ್ ಚಂಡಮಾರುತದ ಕಾರಣ ರಾಜಸ್ಥಾನದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ನಡುವೆಯೂ ತನ್ನ ಕರ್ತವ್ಯದಲ್ಲಿ ನಿರತನಾಗಿರುವ ಗ್ಯಾಸ್ ಏಜೆನ್ಸಿಯೊಂದರ ಉದ್ಯೋಗಿಯೊಬ್ಬರು ಎಲ್‌ಪಿಜಿ ಸಿಲಿಂಡರ್ ಒಂದನ್ನು ಮನೆಗೆ ಡೆಲಿವರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ಶ್ರಮ ಜೀವಿಯ ಕರ್ತವ್ಯಬದ್ಧತೆಯನ್ನು ಮೆಚ್ಚಿಕೊಂಡ ಕೇಂದ್ರ ಪೆಟ್ರೋಲಿಯಂ ಹಾಗೂ ಸ್ವಾಭಾವಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, “ಇಂಧನದ ಲಭ್ಯತೆಯನ್ನು ಖಾತ್ರಿ ಪಡಿಸುತ್ತಿದ್ದಾರೆ. ದೇಶದ ಇಂಧನ ಕ್ಷೇತ್ರದ ಕಾಲಾಳು ಒಬ್ಬರು ತನ್ನ ಕರ್ತವ್ಯದೆಡೆಗೆ ಅಸೀಮಿತ ಬದ್ಧತೆ ತೋರಿ, ಬಿಪರ್‌ಜಾಯ್ ಚಂಡಮಾರುತದ ನಡುವೆಯೂ ರಾಜಸ್ಥಾನದ ಬಾರ್ಮೇರ್‌ನ ಢೋಕ್ ಗ್ರಾಮದಲ್ಲಿ ಗ್ರಾಹಕರೊಬ್ಬರ ಮನೆಗೆ ಇಂಡೇನ್ ರೀಫಿಲ್ಲಿಂಗ್ ಪೂರೈಸಿದ್ದಾರೆ,” ಎಂದು ಟ್ವೀಟ್ ಮಾಡಿದ್ದಾರೆ.
ಭಾರೀ ಮಳೆ ಕಾರಣದ ರಸ್ತೆಯಲ್ಲಿ ನೀರು ಹರಿಯುತ್ತಿದ್ದರೂ ಸಹ ಈ ಡೆಲಿವರಿ ಏಜೆಂಟ್ ಸಿಲಿಂಡರ್‌ಅನ್ನು ಮಳೆಯಲ್ಲೇ ಹೊತ್ತು ತಂದು ಗ್ರಾಹಕರೊಬ್ಬರ ಮನೆಗೆ ಡೆಲಿವರಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಕಾಯಕಯೋಗಿಯ ಕರ್ತವ್ಯನಿಷ್ಠೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.