ಬೆಂಗಳೂರು: ಈಗಾಗಲೇ ಅಗತ್ಯ ವಸ್ತು, ಇಂಧನ, ವಿದ್ಯುತ್ ದರ ಹೆಚ್ಚಳದಿಂದ ಕಂಗಾಲಾಗಿರುವ ಜನ ಸಾಮಾನ್ಯರು ಮತ್ತು ಮಧ್ಯಮ ವರ್ಗದವರಿಗೆ ಮತ್ತೊಂದು ಆಘಾತ ಎದುರಾಗಿದೆ.
ಅಕ್ಕಿ ದರ ಏರಿಕೆ ಮಾಡಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಶನ್ ಚಿಂತನೆ ನಡೆಸಿದೆ. ವಿದ್ಯುತ್ ದರ ಹೆಚ್ಚಳ ಮಾಡಿರುವುದರಿಂದ ರೈಸ್ ಮಿಲ್ ಗಳ ನಿರ್ವಹಣೆ ಭಾರಿ ಹೊರೆಯಾಗುತ್ತಿದೆ. ಇದರೊಂದಿಗೆ ಎಪಿಎಂಸಿ ಟ್ಯಾಕ್ಸ್ ಕೂಡ ಹೊರೆಯಾಗಿ ಪರಿಣಮಿಸಿದ್ದು, ಮಳೆ ಇಲ್ಲದೆ ಭತ್ತ ಸಿಗುತ್ತಿಲ್ಲ. ಹೀಗಾಗಿ ದರ ಏರಿಕೆ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ಪ್ರತಿ ಕೆಜಿ ಅಕ್ಕಿಗೆ ಪ್ರಸ್ತುತ 45 ರೂ.ವರೆಗೆ ದರ ಇದ್ದು, ತೆರಿಗೆ, ಕಾರ್ಮಿಕರ ವೆಚ್ಚ, ವಿದ್ಯುತ್ ಬಿಲ್ ಏರಿಕೆ ಮೊದಲಾದವುಗಳ ಹೆಚ್ಚಳದಿಂದ ರೈಸ್ ಮಿಲ್ ಮಾಲೀಕರಿಗೆ ಹೊರೆಯಾಗಿದ್ದು, ಇದನ್ನು ಸರಿದೂಗಿಸಲು ಅಕ್ಕಿ ಬೆಲೆ 5 ರಿಂದ 10 ರೂ ವರೆಗೆ ಹೆಚ್ಚಿಸುವುದು ಅನಿವಾರ್ಯವೆಂದು ಹೇಳಲಾಗಿದೆ.
ಇದರಿಂದಾಗಿ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿವರೆಗೂ ಅಕ್ಕಿ ಸಿಗಲಿದೆ. ಆದರೆ, ಎಪಿಎಲ್ ಕಾರ್ಡ್ ದಾರರು, ಮಧ್ಯಮವರ್ಗದವರು ಮತ್ತು ಇತರೆಯವರಿಗೆ ಅಕ್ಕಿ ದರ ಹೆಚ್ಚಳದಿಂದ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.