ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನಂತರ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್, ನಾನು ನರೇಂದ್ರ ಮೋದಿಯವರ ಅಭಿಮಾನಿ ಎಂದಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನ್ಯೂಯಾರ್ಕ್‌ನಲ್ಲಿ ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಅವರನ್ನು ಭೇಟಿಯಾದರು.
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ ಎಲಾನ್ ಮಸ್ಕ್ ಅವರು ಭಾರತಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದು, ಮುಂದಿನ ವರ್ಷ ದೇಶಕ್ಕೆ ಭೇಟಿ ನೀಡುವುದಾಗಿ ಹೇಳಿದರು.
ಪ್ರಧಾನಿಯವರ ನಾಯಕತ್ವವನ್ನು ಶ್ಲಾಘಿಸಿದ ಮಸ್ಕ್, ನಾನು ಮೋದಿ ಅಭಿಮಾನಿ ಎಂದರು. ಭಾರತದ ಭವಿಷ್ಯದ ಬಗ್ಗೆ ನಾನು ಉತ್ಸುಕನಾಗಿದ್ದೇನೆ. ಪ್ರಪಂಚದ ಯಾವುದೇ ದೊಡ್ಡ ದೇಶಕ್ಕಿಂತ ಭಾರತವು ಹೆಚ್ಚಿನ ಭರವಸೆಯನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್‌ನಲ್ಲಿ ಹೇಳಿದರು.
ಪ್ರಧಾನಿ ಮೋದಿಯೊಂದಿಗಿನ ತಮ್ಮ ಭೇಟಿಯನ್ನು ವಿವರಿಸಿದ ಟೆಸ್ಲಾ ಸಿಇಒ ಇಬ್ಬರ ನಡುವಿನ ಚರ್ಚೆ ಅತ್ಯುತ್ತಮವಾಗಿತ್ತು. ಜೊತೆಗೆ ಖ್ಯಾತ ಎಲೆಕ್ಟ್ರಿಕ್ ವೆಹಿಕಲ್ (ಇವಿ) ದೈತ್ಯ ಟೆಸ್ಲಾ ಶೀಘ್ರದಲ್ಲೇ ಭಾರತದಲ್ಲಿ ಹೂಡಿಕೆ ಮಾಡಲಿದೆ ಎಂದು ಹೇಳಿದರು.
ಸಭೆಯ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು ಶಕ್ತಿಯಿಂದ ಆಧ್ಯಾತ್ಮಿಕತೆಯವರೆಗಿನ ವಿಷಯಗಳ ಕುರಿತು ಬಹುಮುಖಿ ಸಂಭಾಷಣೆಗಳನ್ನು ನಡೆಸಲಾಯಿತು ಎಂದು ಹೇಳಿದ್ದಾರೆ.