ಮಂಡ್ಯ: ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಠಾಣೆಯಲ್ಲಿ ಎಸ್ಐ ಆಗಿದ್ದ ಬಿ.ಎಸ್. ವೆಂಕಟೇಶ್ ವರ್ಗಾವಣೆಗೊಂಡಿದ್ದು, ಅವರು ಠಾಣೆಯ ನೂತನ ಎಸ್ಐ ಆಗಿರುವ ತಮ್ಮ ಪುತ್ರಿ ಬಿ.ವಿ. ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ತುಮಕೂರು ಜಿಲ್ಲೆ ಹುಲಿಯೂರುದುರ್ಗದವರಾದ ವೆಂಕಟೇಶ್ 16 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ಮಾಜಿ ಸೈನಿಕರ ಕೋಟಾದಲ್ಲಿ ಪಿಎಸ್ಐ ಪರೀಕ್ಷೆಯಲ್ಲಿ ಪಾಸ್ ಆಗಿ 2010 ಬ್ಯಾಚ್ ನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿದ್ದರು. ಅವರು ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ ಹಲವೆಡೆ ಕಾರ್ಯನಿರ್ವಹಿಸಿ ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ಒಂದೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅವರನ್ನು ಮಂಡ್ಯ ಎಸ್.ಪಿ. ಕಚೇರಿಗೆ ವರ್ಗಾವಣೆ ಮಾಡಲಾಗಿದ್ದು, ಇದೇ ಠಾಣೆಗೆ ನೂತನ ಎಸ್ಐ ಆಗಿ ಬಂದಿರುವ ತಮ್ಮ ಪುತ್ರಿ ಬಿ.ವಿ. ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. 2022ರ ಬ್ಯಾಚ್ ನಲ್ಲಿ ಪಿಎಸ್ಐ ಆಗಿರುವ ವರ್ಷಾ ಕಲ್ಬುರ್ಗಿಯಲ್ಲಿ ತರಬೇತಿ ಮುಗಿಸಿ ಮಂಡ್ಯದಲ್ಲಿ ಒಂದು ವರ್ಷ ಪ್ರೊಬೇಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಮೊದಲ ಕರ್ತವ್ಯ ನಿಯೋಜನೆ ಮಂಡ್ಯದಿಂದಲೇ ಆಗಿದ್ದು, ತಂದೆಯಿಂದಲೇ ಅಧಿಕಾರ ಸ್ವೀಕರಿಸಿ ವೃತ್ತಿ ಜೀವನ ಆರಂಭಿಸಿರುವುದು ವಿಶೇಷವಾಗಿದೆ. ಪುತ್ರಿಗೆ ಅಧಿಕಾರ ಹಸ್ತಾಂತರ ಮಾಡಿದ ವೆಂಕಟೇಶ್ ಅವರು ಠಾಣೆಯ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.