ಬೆಂಗಳೂರು: ರಾಜ್ಯ ಸರ್ಕಾರವೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದೆ. ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇ? ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನವರಿಗೆ ನಾಚಿಕೆಯಾಗಬೇಕು. ಜವಾಬ್ದಾರಿ ಬೇಡವೇ? ಹತ್ತು ಕೆಜಿ ಉಚಿತ ಅಕ್ಕಿ ಘೋಷಣೆ ಮಾಡಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕೂಡಲೇ ಕೇಂದ್ರದ ವಿರುದ್ಧ ಆರೋಪ ಮಾಡುತ್ತಾ ಸರ್ಕಾರವೇ ಪ್ರತಿಭಟನೆ ನಡೆಸುತ್ತಿದೆ. ಇದೊಂದು ಬೇಜವಾಬ್ದಾರಿ ಸರ್ಕಾರ. ನಿಮಗೆ ಅಧಿಕಾರ ಕೊಟ್ಟದ್ದು ಪ್ರತಿಭಟನೆ ಮಾಡಲೆಂದೇ? ಎಂದು ಪ್ರಶ್ನಿಸಿದರು.
ಇದು ಕೇವಲ ಸುಳ್ಳು ಹೇಳುವ, ಮೋಸ ಮಾಡುವ ಸರ್ಕಾರ. ಸುಳ್ಳ, ಮಳ್ಳರ ಸರ್ಕಾರವಿದು ಎಂದು ಕಿಡಿಕಾರಿದರು. ಕಾಂಗ್ರೆಸ್ ನವರು ಕೊಟ್ಟ ಭರವಸೆಯಂತೆ 10 ಕೆಜಿ ಉಚಿತ ಅಕ್ಕಿ ಹಾಗೂ ಕೇಂದ್ರ ಸರ್ಕಾರದ 5 ಕೆಜಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ಕೊಡಲಿ ಎಂದು ಆಗ್ರಹಿಸಿದರು.