ವಿಶ್ವದಲ್ಲಿ ಫುಟ್ಬಾಲ್ ಹೊರತುಪಡಿಸಿದರೆ ಕ್ರಿಕೆಟ್ ನಲ್ಲಿಯೇ ಅತಿ ಹೆಚ್ಚು ಹಣದ ಹೊಳೆ ಹರಿಯುತ್ತದೆ ಎಂಬ ಮಾತುಗಳು ಕೇಳಿ ಬರುತ್ತವೆ. ಇತರ ದೇಶಗಳ ಕಥೆ ಹೇಗೋ ಏನೋ ಗೊತ್ತಿಲ್ಲ, ಆದರೆ ಭಾರತದಲ್ಲಿ ಕ್ರಿಕೆಟಿಗೆ ಅತಿ ಹೆಚ್ಚು ಮಹತ್ವವಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲದೆ ಕ್ರಿಕೆಟಿಗರಿಗೆ ನಿವೃತ್ತರಾದ ಬಳಿಕವೂ ಬೇಡಿಕೆ ಇದ್ದು ಕಮೆಂಟರಿ, ಕೋಚಿಂಗ್ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೆಲ ಆಟಗಾರರು ಕ್ರಿಕೆಟ್ ಹೊರತುಪಡಿಸಿ ಇತರೆ ಕ್ಷೇತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸೂರಜ್ ರಂದೀವ್. ಹೌದು, ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಸೂರಜ್ ಆಸ್ಟ್ರೇಲಿಯಾದಲ್ಲಿ ಬಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರನಾಗಿ ಪಾದಾರ್ಪಣೆ ಮಾಡಿದ ಸೂರಜ್ ರಂದೀವ್, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಸ್ಥಾನ ತುಂಬಲಿದ್ದಾರೆ ಎಂದು ಭಾವಿಸಲಾಗಿತ್ತು. 2016 ರವರೆಗೆ ಅಂದರೆ ಏಳು ವರ್ಷಗಳ ಕಾಲ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ಸೂರಜ್ ರಂದೀವ್, 2011ರ ವಿಶ್ವಕಪ್ ಫೈನಲ್ ಪಂದ್ಯದ ಭಾಗವಾಗಿದ್ದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ, ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು.
ಸೂರಜ್ ರಂದೀವ್, ಮಹೇಂದ್ರ ಸಿಂಗ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿಯೂ ಐಪಿಎಲ್ ಪಂದ್ಯಗಳನ್ನಾಡಿದ್ದು, ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಆಸ್ಟ್ರೇಲಿಯಾಗಿ ತೆರಳಿ ಅಲ್ಲಿನ Transdev ಎಂಬ ಕಂಪನಿಯಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಇದೇ ಕಂಪನಿಯಲ್ಲಿ ಮಾಜಿ ಕ್ರಿಕೆಟರುಗಳಾದ ಜಿಂಬಾಬ್ವೆಯ Washington Mwayenga ಹಾಗೂ ಶ್ರೀಲಂಕಾದ ಚಿಂತಕ ಜಯಸಿಂಘೆ ಚಾಲಕರಾಗಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.