ನ್ಯೂಯಾರ್ಕ್: ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಿಂದ ನ್ಯೂಯಾರ್ಕ್ ನಗರಕ್ಕೆ ಹೊರಟಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನವನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿದೆ.
ಪೈಲಟ್ ಕುಡಿದು ತೂರಾಡಿದ್ದರಿಂದ ವಿಮಾನ ರದ್ದುಗೊಳಿಸಲಾಯಿತು. ನಂತರ ಆತನನ್ನು ಬಂಧಿಸಲಾಯಿತು. ಜೂನ್ 16 ರಂದು ಘಟನೆ ನಡೆದಿದೆ. ಪ್ರಯಾಣಿಕರು ಈಗಾಗಲೇ ವಿಮಾನದಲ್ಲಿದ್ದರು ಮತ್ತು ವಿಮಾನವು ಟೇಕ್ ಆಫ್ ಆಗುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ಬೋಯಿಂಗ್ 767 ಟೇಕ್ ಆಫ್ ಆಗಲು ಕೇವಲ 30 ನಿಮಿಷಗಳ ಮೊದಲು 61 ವರ್ಷದ ಪೈಲಟ್ ನನ್ನು ಎಡಿನ್‌ಬರ್ಗ್ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10 ಗಂಟೆಗೆ ಬಂಧಿಸಲಾಯಿತು. ಅವರ ರಕ್ತದ ಆಲ್ಕೋಹಾಲ್ ಮಟ್ಟವು ಕಾನೂನು ಮಿತಿ 0.02 ಕ್ಕಿಂತ ಹೆಚ್ಚಾಗಿತ್ತು. ನ್ಯೂಯಾರ್ಕ್ ವಿಮಾನವನ್ನು ರದ್ದುಗೊಳಿಸಿ ಪ್ರಯಾಣಿಕರಿಗೆ ಬೇರೆ ವ್ಯವಸ್ಥೆ ಮಾಡಲಾಗಿದೆ.
ತನ್ನ ಸಿಬ್ಬಂದಿಯೊಬ್ಬರನ್ನು ಶುಕ್ರವಾರ ಬೆಳಗ್ಗೆ EDI ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡೆಲ್ಟಾ ದೃಢಪಡಿಸಿದೆ. ವಿಮಾನ ರದ್ದತಿಯಿಂದ ತೊಂದರೆಗೊಳಗಾದ ಗ್ರಾಹಕರಲ್ಲಿ ನಾವು ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದೆ.