ಅಸ್ಸಾಂನಲ್ಲಿ ತೀವ್ರ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದೆ. ಭಾನುವಾರ ರಾಜ್ಯದ ಹಲವು ಭಾಗಗಳಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದು, ಹಳ್ಳಿಗಳು, ಪಟ್ಟಣಗಳು ಮತ್ತು ಕೃಷಿಭೂಮಿಗಳು ಮಳೆ ನೀರಲ್ಲಿ ಮುಳುಗಿವೆ.
ಭಾರತೀಯ ಹವಾಮಾನ ಇಲಾಖೆಯು ‘ರೆಡ್ ಅಲರ್ಟ್’ ಹೊರಡಿಸಿದ್ದು ಗುರುವಾರದವರೆಗೆ ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಗುವಾಹಟಿಯಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಹವಾಮಾನ ಕೇಂದ್ರವು (RMC) ರೆಡ್ ಅಲರ್ಟ್ ಹೊರಡಿಸಿದ್ದು ಮುಂದಿನ 24 ಗಂಟೆಯಲ್ಲಿ ಕೊಕ್ರಜಾರ್, ಚಿರಾಂಗ್, ಬಕ್ಸಾ, ಬರ್ಪೇಟಾ ಮತ್ತು ಬೊಂಗೈಗಾಂವ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಅದೇ ಅವಧಿಯಲ್ಲಿ, ಧುಬ್ರಿ, ಕಾಮ್ರೂಪ್, ಕಮ್ರೂಪ್ ಮೆಟ್ರೋಪಾಲಿಟನ್, ನಲ್ಬರಿ, ದಿಮಾ ಹಸಾವೊ, ಕ್ಯಾಚಾರ್, ಗೋಲ್ಪಾರಾ ಮತ್ತು ಕರೀಮ್‌ಗಂಜ್ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ASDMA) ದೈನಂದಿನ ಪ್ರವಾಹ ವರದಿಯ ಪ್ರಕಾರ, ಕ್ಯಾಚಾರ್, ದರ್ರಾಂಗ್, ಧೇಮಾಜಿ, ದಿಬ್ರುಗಢ್, ಗೋಲಾಘಾಟ್, ಹೋಜೈ, ಲಖಿಂಪುರ, ನಾಗಾಂವ್, ನಲ್ಬರಿ, ಸೋನಿತ್‌ಪುರ್, ತಿನ್ಸುಕಿಯಾ ಮತ್ತು ಉದಲ್ಗುರಿ ಜಿಲ್ಲೆಯಲ್ಲಿ 33,400 ಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ.
ಲಖಿಂಪುರದಲ್ಲಿ 25,200 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ, ದಿಬ್ರುಗಢದಲ್ಲಿ 3,800 ಕ್ಕೂ ಹೆಚ್ಚು ಜನರು ಮತ್ತು ಟಿನ್ಸುಕಿಯಾದಲ್ಲಿ ಸುಮಾರು 2,700 ಜನರು ಸಂಕಷ್ಟದಲ್ಲಿದ್ದಾರೆ ಎಂದು ವರದಿ ಹೇಳಿದೆ.
ಆಡಳಿತವು ಮೂರು ಜಿಲ್ಲೆಗಳಲ್ಲಿ 16 ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿ ಪರಿಸ್ಥಿತಿ ನಿಭಾಯಿಸುತ್ತಿದೆ.
ಪ್ರಸ್ತುತ 142 ಗ್ರಾಮಗಳು ಜಲಾವೃತವಾಗಿದ್ದು, ಅಸ್ಸಾಂನಾದ್ಯಂತ 1,510.98 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ASDMA ತಿಳಿಸಿದೆ.
ಬಿಸ್ವನಾಥ್, ಬೊಂಗೈಗಾಂವ್, ದಿಬ್ರುಗಢ್, ಕೊಕ್ರಜಾರ್, ಲಖಿಂಪುರ, ಮಜುಲಿ, ಮೋರಿಗಾಂವ್, ನಾಗಾಂವ್, ಶಿವಸಾಗರ್, ಸೋನಿತ್‌ಪುರ, ದಕ್ಷಿಣ ಸಲ್ಮಾರಾ ಮತ್ತು ಉದಲ್‌ಗುರಿ ಜಿಲ್ಲೆಗಳಲ್ಲಿ ಭೂ ಸವೆತ ಸಂಭವಿಸಿದೆ. ನೇಮತಿಘಾಟ್‌ನಲ್ಲಿ ಬ್ರಹ್ಮಪುತ್ರ, ಅದರ ಉಪನದಿಗಳಾದ ಪುತಿಮರಿ ಮತ್ತು ಕಂಪುರದ ಕೊಪಿಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ವರದಿ ತಿಳಿಸಿದೆ.