ಬೆಂಗಳೂರು: ಈ ಬಾರಿ ಮುಂಗಾರು ಮಳೆ ವಿಳಂಬವಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. ಮಳೆ ನಿರೀಕ್ಷೆಯಲ್ಲಿ ಬಿತ್ತಿದ್ದ ಭತ್ತ ನೀರಿಲ್ಲದೇ ಹೊಲದಲ್ಲಿ ಒಣಗುತ್ತಿದ್ದು, ಹಲವೆಡೆ ಟ್ಯಾಂಕರ್ ಮೂಲಕ ನೀರು ಹರಿಸಿ ಬೆಳೆ ರಕ್ಷಿಸಿಕೊಳ್ಳಲು ರೈತರು ಮುಂದಾಗಿದ್ದಾರೆ.
ಮುಂಗಾರು ವಿಳಂಬದಿಂದಾಗಿ ಉತ್ತರ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. 6 ಜಿಲ್ಲೆಗಳಿಗೆ ನೀರು ಪೂರೈಸುತ್ತಿದ್ದ ಕೊಯ್ನಾಂ ಡ್ಯಾಂ ಖಾಲಿಯಾಗಿದ್ದು, ಡೆಡ್ ಸ್ಟೋರೆಜ್ ಮಟ್ಟ ತಲುಪಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ ಸಧ್ಯ 11.74 ಟಿಎಂಸಿ ನೀರು ಮಾತ್ರ ಇದೆ. ಜಲಾಶಯದಲ್ಲಿ ನೀರು ಸಂಪೂರ್ಣ ಖಾಲಿಯಾಗಿರುವುದರಿಂದ ಉತ್ತರ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ ನೀರಿನ ಕೊರತೆಯುಂಟಾಗಿದೆ.
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಸೇರಿದಂತೆ 6 ಜಿಲ್ಲೆಗಳಲ್ಲಿ ಬರದ ಕಾರ್ಮೋಡ ಆವರಿಸಿದ್ದು, ಒಂದೆಡೆ ಬಿತ್ತನೆಗೂ ನೀರಿಲ್ಲದೇ ರೈತರು ಪರದಾಡುತ್ತಿದ್ದರೆ ಮತ್ತೊಂದೆಡೆ ಜೀವಜಲಕ್ಕಾಗಿ ಹಾಹಾಕಾರ ಆರಂಭವಾಗಿದೆ.