ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಪರೇಷನ್ ರಾಜಕಾಲುವೆ ತೆರವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಟ್ಟಡಗಳ ತೆರವಿಗೆ ಸ್ಥಳೀಯರು ಕೋರ್ಟ್ ನಿಂದ ತಡೆ ತಂದಿದ್ದರೂ ತಹಶೀಲ್ದಾರ್, ಬಿಬಿಎಂಪಿಯ ಅಧಿಕಾರಿಗಳ ಗಮನಕ್ಕೆ ತರದೇ ಬೇಜವಾಬ್ದಾರಿ ಮೆರೆದಿರುವ ಘಟನೆ ನಡೆದಿದೆ.
ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಟ್ಟಡಗಳ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದು, ಬೆಳಿಗೆ 9 ಗಂಟೆಯಿಂದಲೇ ಕೆಆರ್ ಪುರಂ, ಮಹದೇವಪುರ, ಹೊಯ್ಸಳ ನಗರ ವ್ಯಾಪ್ತಿಯಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಆರಂಭವಾಗಿದೆ.
ತೆರವು ಕಾರ್ಯ ಆರಂಭವಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರೂ ತೆರವಿಗೆ ಮುಂದಾಗಿರುವ ಪಾಲಿಕೆ ಕ್ರಮ ಪ್ರಶ್ನಿಸಿದ್ದು, ದಾಖಲೆಗಳನ್ನು ತೋರಿಸಿದ್ದಾರೆ. ತಹಶೀಲ್ದಾರ್ ಎಡವಟ್ಟಿನಿಂದಾಗಿ ಪಾಲಿಕೆ ಅಧಿಕಾರಿಗಳು ಮುಜುಗರಕ್ಕೀಡಾಗಿದ್ದಾರೆ.
ಕೆಲ ದಿನಗಳ ಹಿಂದೆ ತೆರವು ಕಾರ್ಯಾಚರಣೆ ಮಾಡುವುದಾಗಿ ಬೆಂಗಳೂರು ಉತ್ತರ ತಹಶೀಲ್ದಾರ್ ಸ್ಥಳೀಯ ನಿವಾಸಿಗಳಿಗೆ ನೋಟಿಸ್ ನೀಡಿದ್ದರು.
ತಹಶೀಲ್ದಾರ್ ನೋಟಿಸ್ ಗೆ ನಿವಾಸಿಗಳು ಸ್ಟೇ ತಂದಿದ್ದರು. ಜೂನ್ 15ರಂದು ಶಾಸಕರು ಹಾಗೂ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿದ್ದ ತಹಶೀಲ್ದಾರ್, ನಿವಾಸಿಗಳು ತಂದಿದ್ದ ಸ್ಟೇ ಬಗ್ಗೆ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತರದೇ ಬೇಜವಾಬ್ದಾರಿ ಮೆರೆದಿದ್ದಾರೆ.
ತಹಶೀಲ್ದಾರ್ ಎಡವಟ್ಟಿನಿಂದಾಗಿ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗಿ ಮುಜುಗರಕ್ಕೀಡಾದ ಪ್ರಸಂಗ ನಡೆದಿದ್ದು, ಸಧ್ಯ ಬೆಂಗಳೂರು ಉತ್ತರ ಭಾಗದಲ್ಲಿ ತೆರವು ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.