ಲೈಂಗಿಕ ಕಿರುಕುಳದ ಸಂಬಂಧ ಸತತ ಮೂರು ಆಪಾದನೆಗಳನ್ನು ಎದುರಿಸಿದ ಆಸ್ಟ್ರೆಲಿಯನ್ ಸಂಸದರೊಬ್ಬರಿಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಅವರ ಸಹೋದ್ಯೋಗಿಗಳು ಆಗ್ರಹಿಸಿದ್ದಾರೆ.
ಸೆನೆಟರ್ ಡೇವಿಡ್ ವಾನ್ ಈ ಆಪಾದನೆಗಳನ್ನು ಎದುರಿಸುತ್ತಿದ್ದು, ಅವರು ಪ್ರತಿನಿಧಿಸುವ ಆಸ್ಟ್ರೇಲಿಯನ್ ಲಿಬರಲ್ ಪಕ್ಷದ ನಾಯಕ ಪೀಟರ್ ಡ್ಯುಟಾನ್ ತಮ್ಮ ಸಹೋದ್ಯೋಗಿಗೆ ಕರೆ ಮಾಡಿ ರಾಜೀನಾಮೆ ಕೊಡುವಂತೆ ಆಗ್ರಹಿಸಿದ್ದಾರೆ.
ಜೂನ್ 15ರಂದು ತಮ್ಮ ಪಕ್ಷದ ಸಂಸದನ ಮೇಲೆ ಮೂರನೇ ಆಪಾದನೆ ಕೇಳಿ ಬಂದ ಕಾರಣ ತಾವು ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದ ಡುಟ್ಟಾನ್, “ಆತ ಸಾಧ್ಯವಾದಷ್ಟು ಬೇಗ ಸಂಸತ್ತಿನಿಂದ ನಿವೃತ್ತನಾಗುವುದು ಎಲ್ಲರ ಹಿತಾಸಕ್ತಿಗೂ ಒಳ್ಳೆಯದು ಎನಿಸುತ್ತದೆ. ಬಳಿಕ ಆತ ತನಗೆ ಬೇಕಾದ ಸಹಾಯವನ್ನಾದರೂ ಪಡೆಯಬಹುದು. ಇದುವೇ ಸೂಕ್ತವಾದ ಮುಂದಿನ ನಡೆ ಎಂದು ನನಗೆ ಅನಿಸುತ್ತದೆ. ನನಗೆ ಲಭ್ಯವಾದ ಎಲ್ಲ ಮಾಹಿತಿಯನ್ನು ಆಧರಿಸಿ ನಾನು ನೆನ್ನೆ ನನ್ನ ನಿರ್ಣಯವನ್ನು ಮಾಡಿದ್ದೇನೆ ಹಾಗೂ ಈ ನಿರ್ಣಯದ ಕುರಿತು ನನಗೆ ಯಾವ ವಿಷಾದವೂ ಇಲ್ಲ,” ಎಂದು ಡುಟ್ಟಾನ್ ತಿಳಿಸಿದ್ದಾರೆ.
ಲಿಬರಲ್ ಪಕ್ಷದ ಮಾಜಿ ಸಂಸದೆ ಅಮಾಂದಾ ಸ್ಟೋಕರ್, ವಾನ್ ವಿರುದ್ಧ ಮೊದಲ ಆರೋಪ ಮಾಡಿದ್ದರು. ನವೆಂಬರ್ 2020ರಲ್ಲಿ ವಾನ್ ತಮ್ಮನ್ನು ’ಅಸಹನೀಯ ರೀತಿಯಲ್ಲಿ’ ಸ್ಪರ್ಶಿಸಿದ್ದರು ಎಂದು ಅಮಾಂದಾ ಆರೋಪಿಸಿದ್ದರು.
ಇದೇ ರೀತಿಯ ಆಪಾದನೆ ಮಾಡಿದ ಮತ್ತೊಬ್ಬ ಸಂಸದೆ ಲಿಡಿಯಾ ಥೋರ್ಪ್, ತಮ್ಮ ವಿರುದ್ಧ ಲೈಂಗಿಕ ಕಾಮೆಂಟ್ಗಳನ್ನು ಮಾಡಿದ್ದ ಪುರುಷ ಸಂಸದನೊಬ್ಬ ಸಂಸತ್ತಿನ ಇತರ ಸದಸ್ಯರೆದುರೇ ಅಸಭ್ಯವಾಗಿ ಸ್ಪರ್ಶಿಸಲು ಬಂದಿದ್ದ ಎಂದು ಆರೋಪ ಮಾಡಿದ್ದರು.
ಲಿಬರಲ್ ಪಾರ್ಟಿಯ ವಿಕ್ಟೋರಿಯಾ ರಾಜ್ಯದ ಅಂಗದ ಪ್ರತಿನಿಧಿಯಾಗಿರುವ ವಾನ್ರನ್ನು ಪಕ್ಷದಿಂದ ಶಾಶ್ವತವಾಗಿ ಕಿತ್ತೊಗೆದು ಆತನಿಂದ ಪಕ್ಷಕ್ಕೆ ಆಗಿರುವ ಹಾನಿಯನ್ನು ಸರಿದೂಗಿಸಬೇಕೆಂದು ಖುದ್ದು ಅದೇ ಪಕ್ಷದ ನಾಯಕರು ಪ್ರತಿಪಾದಿಸಿದ್ದಾರೆ.