ಬೆಂಗಳೂರು : ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಅದರಲ್ಲೂ ಮಾಂಸ ಪ್ರಿಯರಿಗೆ ಇದೀಗ ಚಿಕನ್, ಮೊಟ್ಟೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.
ಹೌದು. ಗರಿಷ್ಟ ತಾಪಮಾನದ ಪರಿಣಾಮ ಚಿಕನ್ ಹಾಗೂ ಮೊಟ್ಟೆ ದರದಲ್ಲಿ ಏರಿಕೆಯಾಗಿದೆ. ಚಿಕನ್ ದರ ಕೆಜಿ 220 ರಿಂದ 240 ಕ್ಕೆ ಏರಿಕೆಯಾಗಿದ್ದರೆ,ಟೈಸನ್ ಕೋಳಿ ಕೆಜಿಗೆ 230-250 ಕ್ಕೆ ಮಾರಾಟವಾಗುತ್ತಿದೆ. ನಾಟಿ ಕೋಳಿ ಕೆಜಿಗೆ 250-290 ರೂವರೆಗೆ ಮಾರಾಟವಾಗುತ್ತಿದೆ. ಫಾರಂ ಕೋಳಿ ಕೆಜಿಗೆ 200 ರೂವರೆಗೂ ಮಾರಾಟವಾಗುತ್ತಿದೆ.
ಅದೇ ರೀತಿ ಮೊಟ್ಟೆ ಬೆಲೆ ಕೂಡ ಏರಿಕೆಯಾಗಿದ್ದು, ಮೊಟ್ಟೆ ಬೆಲೆ 5 ರೂಪಾಯಿಯಿಂದ ಇದೀಗ 6.5 ರೂಪಾಯಿಗೆ ಏರಿಕೆಯಾಗಿದೆ.ಕೆಲವು ಕಡೆ 7 ರೂಗೆ ಕೂಡ ಮೊಟ್ಟೆ ಮಾರಾಟವಾಗುತ್ತಿದೆ. ಮೊಟ್ಟೆಗೆ ರಾಜ್ಯದಲ್ಲಿ ಭಾರಿ ಬೇಡಿಕೆ ಬರುತ್ತಿದ್ದು, ಇತರ ರಾಜ್ಯಗಳಿಂದ ಕೂಡ ಭಾರಿ ಬೇಡಿಕೆ ಬರುತ್ತಿದೆ ಎನ್ನಲಾಗಿದೆ. ಗರಿಷ್ಟ ತಾಪಮಾನ, ಹೀಟ್ ವೇವ್ಸ್ ಪರಿಣಾಮ ಚಿಕನ್ ಹಾಗೂ ಮೊಟ್ಟೆ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. ಬೇಸಿಗೆಯಲ್ಲಿ ಚಿಕನ್ ಹಾಗೂ ಮೊಟ್ಟೆಗೆ ಭಾರಿ ಬೇಡಿಕೆ ಬಂದಿತ್ತು, ಮಕ್ಕಳು ರಜಾದಿನಗಳಿಗಾಗಿ ಮನೆಯಲ್ಲಿಯೇ ಇರುವ ಸಮಯ, ಮತ್ತು ಪಾರ್ಟಿಗಳು, ಭೋಜನಗಳು ಮತ್ತು ಇತರ ಸಮಾರಂಭಗಳು ಹೆಚ್ಚು ನಡೆಯುವ ಹಿನ್ನೆಲೆ ಭಾರಿ ಬೇಡಿಕೆ ಬಂದಿತ್ತು ಎನ್ನಲಾಗಿದೆ.