ಗದಗ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಹೀಯಾಳಿಸಿ, ಸಿಎಂ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಲ್ಲದೇ, ಒಂದು ಸಮುದಾಯದ ಭಾವನೆಗಳಿಗೆ ಭಂಗ ತಂದ ಆರೋಪದಡಿ ಗದಗ ಜಿಲ್ಲೆ ಗಜೇಂದ್ರಗಢದ ವ್ಯಕ್ತಿ ಒಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.
ಗಜೇಂದ್ರಗಢದ ಮುತ್ತಣ್ಣ ಮ್ಯಾಗೇರಿ ಎಂಬುವರು ಜೂನ್ 11 ರಂದು ಫೇಸ್ಬುಕ್ ಖಾತೆಯಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆ ಟೀಕಿಸಿ ಪೋಸ್ಟ್ ಹಾಕಿದ್ದಾರೆ. ಷರತ್ತಿನ ಮೇಲೆ ಷರತ್ತು ಹಾಕಿ ಕೊನೆಗೆ ಅವರ ಬಾಂಧವರಿಗಷ್ಟೇ ಯೋಜನೆ ತಲುಪಿಸುವುದು ಗ್ಯಾರಂಟಿಯ ಉದ್ದೇಶ. ಮಹಿಳೆಯರಿಗೆ ಬಸ್ ನಲ್ಲಿ ಉಚಿತ, ವ್ಯಾನಿಟಿ ಬ್ಯಾಗ್ ಗೆ ಖಚಿತ, ಇದು ಮುಲ್ಲಾ ಖಾನ್ ಆದೇಶ. ಸೀತಾ ಮಾತೆ ಲಂಕಾದಲ್ಲಿದ್ದಷ್ಟು ದಿನ ಸುರಕ್ಷಿತವಾಗಿದ್ದರು. ಏಕೆಂದರೆ ರಾವಣ ವೇದ, ಪುರಾಣಗಳನ್ನು ಓದಿದ್ದನೇ ಹೊರತು ಕುರಾನ್ ಅಲ್ಲ ಎಂದು ಪೋಸ್ಟ್ ಹಾಕಿದ್ದರು.
ಇದು ಸಿಎಂ ಅವಹೇಳನ, ಒಂದು ಸಮುದಾಯದ ಜನರ ಮತೀಯ ಭಾವನೆ ಕೆರಳಿಸಿ ಸಮುದಾಯಗಳ ನಡುವೆ ಎತ್ತಿ ಕಟ್ಟುವ ಪೋಸ್ಟ್ ಆಗಿದೆ ಎಂದು ಆರೋಪಿಸಿ ಅರ್ಜುನ್ ಎಂಬುವರು ದೂರು ನೀಡಿದ್ದರು. ದೂರು ಸ್ವೀಕರಿಸಿದ ಗಜೇಂದ್ರಗಢ ಠಾಣೆ ಪೊಲೀಸರು ಮುತ್ತಣ್ಣನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.