2023 ರ ಏಷ್ಯಾ ಕಪ್ ಕ್ರಿಕೆಟ್ ಆವೃತ್ತಿಯು ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ನಡೆಯಲಿದೆ. ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ಏಷ್ಯಾಕಪ್‌ನಲ್ಲಿ ಭಾಗವಹಿಸಲಿವೆ. ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದರೆ, ಒಂಬತ್ತು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.
ಏಷ್ಯಾ ಕಪ್ 2023 ಆಗಸ್ಟ್ 31 ರಿಂದ ಸೆಪ್ಟೆಂಬರ್ 17 2023 ರವರೆಗೆ ನಡೆಯಲಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಒಟ್ಟು 13 ರೋಚಕ ODI ಪಂದ್ಯಗಳಲ್ಲಿ ಸ್ಪರ್ಧಿಸಲಿವೆ ಎಂದು ಏಷಿಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಣೆಯಲ್ಲಿ ತಿಳಿಸಿದೆ.
2023 ರ ಆವೃತ್ತಿಯು ಎರಡು ಗುಂಪುಗಳನ್ನು ಹೊಂದಿರುತ್ತದೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ನಂತರ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಕ್ರಿಕೆಟ್‌ನ ಈ ಆಚರಣೆಯನ್ನು ಅತ್ಯುತ್ತಮವಾಗಿ ವೀಕ್ಷಿಸಲು ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಎಸಿಸಿ ಹೇಳಿದೆ. ಈ ಬಾರಿಯ ಏಷ್ಯನ್ ಕಪ್ ಆವೃತ್ತಿಯ ಆತಿಥ್ಯವನ್ನು ಪಾಕಿಸ್ತಾನ ಹೊಂದಬೇಕಿತ್ತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿತ್ತು.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೂಡ ಏಷ್ಯಾ ಕಪ್ ಅನ್ನು ಪಾಕಿಸ್ತಾನದಿಂದ ಹೊರಗೆ ಸ್ಥಳಾಂತರಿಸಲು ಒಪ್ಪಲಿಲ್ಲ. ಹೀಗಾಗಿ ಎಸಿಸಿ ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ನಡೆಸಲು ತೀರ್ಮಾನಿಸಿದೆ. ಈ ಮೂಲಕ ಸದ್ಯಕ್ಕೆ ಎಸಿಸಿ ಚಾಂಪಿಯನ್‌ಶಿಪ್ ನಡೆಯುವ ಸ್ಥಳಗಳ ಬಗ್ಗೆ ಇದ್ದ ಅನುಮಾನಗಳಿಗೆ ತೆರೆ ಎಳೆದಿದೆ