ಮೇ ತಿಂಗಳಲ್ಲಿ ದಾಖಲೆ ಮಟ್ಟ ತಲುಪಿದ್ದ ಚಿನ್ನ ಹಾಗೂ ಬೆಳ್ಳಿಯ ದರ ಇಳಿಮುಖವಾಗುತ್ತಿದೆ. ಸತತ ಐದನೇ ದಿನವಾದ ಗುರುವಾರವೂ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದರು. 62 ಸಾವಿರದ ಗಡಿ ದಾಟಿದ್ದ ಚಿನ್ನದ ಬೆಲೆ ಈಗ 59,000 ರೂಪಾಯಿಗೆ ಬಂದು ತಲುಪಿದೆ.
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ಮತ್ತು ಬುಲಿಯನ್ ಮಾರುಕಟ್ಟೆ ಎರಡೂ ಕಡೆಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಕುಸಿತ ದಾಖಲಿಸಿವೆ. ಕಳೆದ ಒಂದೂಕಾಲು ತಿಂಗಳಲ್ಲಿ ಬಂಗಾರದ ಬೆಲೆ ಸುಮಾರು 2700 ರೂಪಾಯಿಯಷ್ಟು ಕುಸಿದಿದೆ. ಬೆಳ್ಳಿ ಕೂಡ 71,000 ರೂಪಾಯಿಗೆ ತಲುಪಿದ್ದು, ಈ ಅವಧಿಯಲ್ಲಿ 6000 ರೂಪಾಯಿಯಷ್ಟು ಇಳಿಕೆ ದಾಖಲಿಸಿದೆ. ಎಂಸಿಎಕ್ಸ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಕಂಡುಬಂದಿದೆ.
ಗುರುವಾರ MCX ನಲ್ಲಿ 10 ಗ್ರಾಂ ಚಿನ್ನದ ದರ 545 ರೂಪಾಯಿ ಇಳಿಕೆಯೊಂದಿಗೆ 58753 ರೂಪಾಯಿಗೆ ಬಂದು ತಲುಪಿದೆ. ಬೆಳ್ಳಿ 1786 ರೂಪಾಯಿ ಇಳಿಕೆಯೊಂದಿಗೆ ಕೆಜಿಗೆ 70865 ರೂಪಾಯಿ ಆಗಿದೆ. ಬುಧವಾರ ಎಂಸಿಎಕ್ಸ್‌ನಲ್ಲಿ ಚಿನ್ನ 59, 298 ರೂಪಾಯಿ ಆಗಿದ್ದರೆ ಮತ್ತು ಬೆಳ್ಳಿ ಕೆಜಿಗೆ 72,651 ರೂಪಾಯಿ ಇತ್ತು.
ಬುಲಿಯನ್ ಮಾರುಕಟ್ಟೆಯಲ್ಲೂ ಭಾರೀ ಕುಸಿತ
ಬುಲಿಯನ್ ಮಾರುಕಟ್ಟೆ ದರಗಳನ್ನು ಪ್ರತಿದಿನ ಮಧ್ಯಾಹ್ನ https://ibjarates.com ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ವೆಬ್‌ಸೈಟ್ ದರವನ್ನು ಹೊರತುಪಡಿಸಿ, ನೀವು ಖರೀದಿಗೆ ಜಿಎಸ್‌ಟಿ ಮತ್ತು ಮೇಕಿಂಗ್ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಗುರುವಾರ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 200 ರೂಪಾಯಿಯಷ್ಟು ಕುಸಿದು 10 ಗ್ರಾಂಗೆ 59020 ರೂಪಾಯಿಗೆ ತಲುಪಿದೆ. ಅದೇ ರೀತಿ ಬೆಳ್ಳಿ ಪ್ರತಿ ಕೆಜಿಗೆ 700 ರೂಪಾಯಿ ಇಳಿಕೆಯಾಗಿ 71,421 ರೂಪಾಯಿಗೆ ತಲುಪಿದೆ.