ತುಮಕೂರು: ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಮೂವರನ್ನು ಗುಬ್ಬಿ ತಾಲೂಕಿನ ಚೇಳೂರು ಠಾಣೆ ಬಂಧಿಸಿದ್ದಾರೆ.
ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಗುಬ್ಬಿ ತಾಲೂಕಿನ ಚಿಕ್ಕಹೆಡಿಗೆಹಳ್ಳಿಯ ಯುವತಿಯನ್ನು ಆಕೆಯ ಪೋಷಕರೇ ಕೊಲೆ ಮಾಡಿದ್ದು, ಯುವತಿಯ ತಂದೆ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
20 ವರ್ಷದ ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವತಿ ಹತ್ಯೆಯಾಗಿದ್ದಾಳೆ. ಆಕೆಯ ತಂದೆ, ಸಹೋದರ ಮತ್ತು ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಶಿರಾದಲ್ಲಿ ಪದವಿ ಓದುತ್ತಿದ್ದ ಯುವತಿ ಹಾಸ್ಟೆಲ್ ನಲ್ಲಿದ್ದಳು. ಶಿರಾ ತಾಲೂಕಿನ ಯುವಕನನ್ನು ಪ್ರೀತಿಸಿದ್ದು, ಎರಡು ವಾರದ ಹಿಂದೆ ಮನೆ ಬಿಟ್ಟು ಹೋಗಿದ್ದ ಯುವತಿ, ಯುವಕ ಮದುವೆಯಾಗಿದ್ದಾರೆ.
ಗುರುವಾರ ಆಕೆಯನ್ನು ಮನೆಗೆ ಕರೆದುಕೊಂಡ ಬಂದ ಪೋಷಕರು ಅದೇ ದಿನ ರಾತ್ರಿ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗ್ರಾಮಸ್ಥರನ್ನು ನಂಬಿಸಿ ತರಾತುರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಅನುಮಾನದ ಮೇಲೆ ಗ್ರಾಮಸ್ಥರು ಚೇಳೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಯುವತಿಯ ಪೋಷಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಗೊತ್ತಾಗಿದೆ.