alex Certify World Blood Donor Day : ಇಂದು ʻವಿಶ್ವ ರಕ್ತದಾನಿಗಳ ದಿನʼ: ರಕ್ತದಾನಕ್ಕೂ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

World Blood Donor Day : ಇಂದು ʻವಿಶ್ವ ರಕ್ತದಾನಿಗಳ ದಿನʼ: ರಕ್ತದಾನಕ್ಕೂ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ

ಶಿವಮೊಗ್ಗ : ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಜೂನ್ 14 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ರಕ್ತ ನೀಡಿ, ಪ್ಲಾಸ್ಮ ನೀಡಿ, ಜೀವನ ಹಂಚಿಕೊಳ್ಳಿ, ನಿರಂತರವಾಗಿ ಹಂಚಿಕೊಳ್ಳಿ ಎಂಬ ಘೋಷಣೆಯೊಂದಿಗೆ ಈ ವರ್ಷವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆಯನ್ನು(World Blood Donor Day) ಆಚರಿಸಲಾಗುತ್ತಿದೆ.

ಪ್ರಖ್ಯಾತ ವಿಜ್ಞಾನಿಯಾದ ಕಾರ್ಲ್ ಲ್ಯಾಂಡ್ಸ್ಟೈನರ್ ಪ್ರಥಮ ಬಾರಿಗೆ ಎ.ಬಿ.ಒ ರಕ್ತದ ಗುಂಪುಗಳನ್ನು ಕಂಡು ಹಿಡಿದರು. ಇವರ ಹುಟ್ಟು ಹಬ್ಬದ ನೆನಪಿಗಾಗಿ 2004 ರಿಂದ ವಿಶ್ವ ಆರೋಗ್ಯ ಸಂಸ್ಥೆ ಜೂನ್ 14 ರಂದು ವಿಶ್ವ ರಕ್ತ ದಾನಿಗಳ ದಿನವನ್ನು ಆಚರಣೆಗೆ ತರಲಾಯಿತು. ಈ ಕಾರ್ಯಕ್ರಮದ ಮೂಲಕ ರಕ್ತದಾನದ ಬಗ್ಗೆ ಅರಿವು ಮೂಡಿಸುವುದು ಸುರಕ್ಷಿತ ರಕ್ತವನ್ನು ಒದಗಿಸುವುದು ಹಾಗೂ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದಂತಹ ರಕ್ತದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಸ್ವಯಂ ಪ್ರೇರಿತ ರಕ್ತದಾನವು ರಕ್ತದಾನ ಶಿಬಿರಗಳಿಂದ ಮಾತ್ರ ಸಾಧ್ಯ, ಸ್ವಯಂ ಪ್ರೇರಿತ ಸುರಕ್ಷಿತ ರಕ್ತದಾನದಿಂದ ಹೆಚ್.ಐ.ವಿ/ಏಡ್ಸ್ನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಬಹುದಾಗಿದೆ.

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು, ಸ್ವಯಂ ಪ್ರೇರಿತನಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಕೊಡುವುದಕ್ಕೆ “ರಕ್ತದಾನ” ಎನ್ನುವರು.
ರಕ್ತಕ್ಕೆ ವರ್ಷವಿಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಏಕೆಂದರೆ ಅಪಘಾತಗಳು ತುರ್ತು ಚಿಕಿತ್ಸೆ ಸಂದರ್ಭಗಳು ಬರುತ್ತಲೇ ಇರುತ್ತವೆ ಜೊತೆಯಲ್ಲಿ ಕ್ಯಾನ್ಸರ್ ರೋಗಿಗಳು, ಗರ್ಭೀಣಿ ಸ್ತ್ರೀಯರು, ತಲಸೀಮಿಯ, ಹಿಮೋಫೀಲಿಯ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ.

ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35 ದಿನಗಳವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. 35 ದಿನಗಳ ನಂತರ, ಅದು ಉಪಯೋಗಕ್ಕೆ ಬರುವುದಿಲ್ಲ, ಆದ್ದರಿಂದ 18 ವಯಸ್ಸಿನಿಂದ 60 ವರ್ಷದ ಒಳಗಿನ ಪ್ರತಿಯೊಬ್ಬ ಆರೋಗ್ಯವಂತರು ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ನಿರಂತರವಾಗಿ ಅವಶ್ಯಕತೆ ಇರುವವರಿಗೆ, ರಕ್ತ ನೀಡಿ ಜೀವ ಉಳಿಸಲು ಸಾಧ್ಯವಾಗುತ್ತದೆ.

ರಕ್ತವನ್ನು ನೀಡಿ ಇನ್ನೊಬ್ಬರ ಜೀವವನ್ನು ಉಳಿಸುವುದರೊಂದಿಗೆ ತಮ್ಮ ದೇಹದಲ್ಲಿ ಇರುವ ರಕ್ತದ ಗುಂಪು ಯಾವುದು ಎಂದು ತಿಳಿದುಕೊಳ್ಳುವುದು  ಮುಖ್ಯವಾಗಿರುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ರಕ್ತದ ಅನಿವಾರ್ಯತೆ ಇದ್ದಾಗ ಮುಂಚಿತವಾಗಿ ರಕ್ತದ ಗುಂಪಿನ ಮಾಹಿತಿ ತಿಳಿದಿರುವುದು ಅವಶ್ಯಕವಾಗಿರುತ್ತದೆ.
ಜಿಲ್ಲೆಯಲ್ಲಿ ಒಟ್ಟು 8 ರಕ್ತ ಕೇಂದ್ರಗಳು (1 ಸರ್ಕಾರಿ ರಕ್ತನಿಧಿ ಕೇಂದ್ರ, 7 ಖಾಸಗಿ ರಕ್ತ ನಿಧಿ ಕೇಂದ್ರಗಳು) ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ 6 ರಕ್ತ ಸಂರಕ್ಷಣ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 2022-23 ನೇ ಸಾಲಿನಲ್ಲಿ ಒಟ್ಟು 35070 ರಕ್ತ ಯುನಿಟ್ಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 19611 ಯುನಿಟ್ಗಳನ್ನು ರಕ್ತ ಕೇಂದ್ರದಲ್ಲಿ, 379 ಶಿಬಿರಗಳಿಂದ 12762 ಯುನಿಟ್ಗಳನ್ನು ಸ್ವಯಂ ಪ್ರೇರಿತರಾಗಿ ನೀಡಿದ್ದು ಹಾಗೂ 2697 ಯುನಿಟ್ಗಳನ್ನು ಬದಲಿ ರಕ್ತದಾನದ ಮೂಲಕ ಸಂಗ್ರಹಿಸಲಾಗಿರುತ್ತದೆ. ಗ್ರಾಮ ಪಂಚಾಯತ್ಗಳು ಸಂಘ ಸಂಸ್ಥೆಗಳು, ರೆಡ್ ರಿಬ್ಬನ್ ಕ್ಲಬ್ ಎನ್.ಎಸ್.ಎಸ್ ಘಟಕಗಳು, ನೌಕರರ ಸಂಘಗಳು ಹಾಗೂ ಗ್ರಾಮೀಣ ಪ್ರದೇಶಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯು ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ರಕ್ತದ ಮಹತ್ವ :
• ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ.
• ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ.
• ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಬಹುದು.
• ರಕ್ತದಾನ ಮಾಡುವುದು ಪ್ರತೀ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಗ್ರಸ್ಥರು ಮತ್ತು ಗಾಯಗೊಂಡವರನ್ನು ಬದುಕಿಸಲು ಸಾಧ್ಯ.
• ರಕ್ತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ, ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಾರಂಭವಾಗಿ 24 ಗಂಟೆಯ ಒಳಗಾಗಿ ದಾನ ಮಾಡಿದ ಪ್ರಮಾಣದ ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ.
• ಒಂದೆರಡು ವಾರಗಳಲ್ಲಿ ರಕ್ತದ ಎಲ್ಲಾ ಆಂಶಗಳು ದಾನಿಯ ರಕ್ತದಲ್ಲಿ ಸಂಪೂರ್ಣವಾಗಿ ತುಂಬಿಕೊಳ್ಳುತ್ತದೆ.
• ರಕ್ತದಾನ ಮಾಡುವಾಗ ಒಂದು ಚುಚ್ಚುಮದ್ದು ತೆಗೆದುಕೊಳ್ಳುವಾಗ ಆಗುವುದಕ್ಕಿಂತ ಹೆಚ್ಚು ನೋವು ಆಗುವುದಿಲ್ಲ.
• ರಕ್ತದಾನ ಮಾಡಲು ಮತ್ತು ಸುಧಾರಿಸಿಕೊಳ್ಳಲು, ಒಟ್ಟು ಸೇರಿ 20 ನಿಮಿಷಕ್ಕೂ ಹೆಚ್ಚಿನ ಸಮಯ ಬೇಕಾಗಿಲ್ಲ.
ಯಾರು ರಕ್ತದಾನ ಮಾಡಬಹುದು?
• ಹೆಣ್ಣು ಗಂಡೆಂಬ ಬೇಧವಿಲ್ಲದೇ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.
• ಗಂಡಸರು 3 ತಿಂಗಳಿಗೊಮ್ಮೆ ಮತ್ತು ಹೆಂಗಸರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
• ದಾನಿಯ ದೇಹದ ತೂಕ 45 ಕೆ.ಜಿ ಗಿಂತ ಹೆಚ್ಚಿರಬೇಕು.
• ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು.

ಯಾರು ರಕ್ತ ದಾನ ಮಾಡಬಾರದು?

ಯಾವದಾದರೂ ಕಾಯಿಲೆಯಿಂದ ನರಳುತ್ತಿದ್ದರೆ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದರೆ ರಕ್ತದಾನ ಮಾಡಬಾರದು. ಮಧ್ಯಪಾನ ಹಾಗೂ ಮಾದಕ ದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು. ಮಹಿಳೆಯರು, ತಿಂಗಳ ಮುಟ್ಟಿನ ಸಮಯದಲ್ಲಿ ಗರ್ಭಿಣಿಯರಾಗಿದ್ದಾಗ, ಎದೆಹಾಲುಣಿಸುತ್ತಿರುವಾಗ ಮತ್ತು ಹೆರಿಗೆಯ ನಂತರ 6 ತಿಂಗಳು ರಕ್ತದಾನ ಮಾಡಬಾರದು.

ಯಾವುದೇ ವ್ಯಕ್ತಿ ಕಾಯಿಲೆಯ ವಿರುದ್ಧ ಲಸಿಕೆ ಪಡೆದಿದ್ದರೆ, ಅಂತಹವರು ಲಸಿಕೆ ಪಡೆದ 4 ವಾರಗಳವರೆಗೆ ರಕ್ತದಾನ ಮಾಡಬಾರದು. ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ, ಚಿಕಿತ್ಸೆ ಪಡೆದ ನಂತರದ ಮೂರು ತಿಂಗಳು ರಕ್ತದಾನ ಮಾಡಬಾರದು. ಆಸ್ಪರಿನ್ ಸೇವಿಸಿದ್ದರೆ, ಅಂತಹ ವ್ಯಕ್ತಿ ಮಾತ್ರೆ ಸೇವಿಸಿದ ನಂತರ ಮೂರು ದಿನ ರಕ್ತದಾನ ಮಾಡಬಾರದು.

ಹಿಂದಿನ 3 ತಿಂಗಳಲ್ಲಿ ತಾವೇ ಯಾವುದೇ ರಕ್ತ ಅಥವಾ ರಕ್ತದ ಅಂಶ ಪಡೆದಿದ್ದರೆ ಅಂತಹವರು ರಕ್ತದಾನ ಮಾಡಬಾರದು. ಯಾವುದೇ ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ ಅಂತಹವರು ಮುಂದಿನ 6 ತಿಂಗಳವರೆಗೆ ಮತ್ತು ಚಿಕ್ಕ ಪ್ರಮಾಣದ ಚಿಕಿತ್ಸೆಗೆ ಒಳಗಾಗಿದ್ದರೆ, ಅಂತಹವರು ಮುಂದಿನ 3 ತಿಂಗಳವರೆಗೆ ರಕ್ತದಾನ ಮಾಡಬಾರದು. ಕಾಮಾಲೆ, ಹೆಚ್.ಐ.ವಿ ಲೈಂಗಿಕ ರೋಗವಿರುವವರು ರಕ್ತದಾನ ಮಾಡಬಾರದು.

ಕ್ಯಾನ್ಸರ್, ಹೃದಯದ ಕಾಯಿಲೆ, ಅಸಹಜ ರಕ್ತಸ್ರಾವ, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ಮಧುಮೇಹ, ಹೈಪಿಟೈಟಿಸ್ ಬಿ ಮತ್ತು ಸಿ, ಮೂತ್ರಪಿಂಡ ಸಂಬಂಧ ಕಾಯಿಲೆ ಹಾಗೂ ಲಿವರ್ಗೆ ಸಂಬಂಧಿಸಿದ ಕಾಯಿಲೆಯಿರುವ ವ್ಯಕ್ತಿ ರಕ್ತದಾನ ಮಾಡಬಾರದು.

ರಕ್ತದ ಮೂಲಕ ಹರಡಬಹುದಾದ ರೋಗಗಳು :

ಮಲೇರಿಯಾ, ಲೈಂಗಿಕ ಸಂಪರ್ಕದ ರೋಗಗಳು – ಸಿಫಿಲಿಸ್ ಇತ್ಯಾದಿ. ಹೈಪಿಟೈಟಿಸ್ ಬಿ ಮತ್ತು ಸಿ ಸೋಕಿನಿಂದುಂಟಾಗುವ ಕಾಮಾಲೆ. ಹೆಚ್.ಐ.ವಿ ಸೋಂಕು ಮತ್ತು ಏಡ್ಸ್.
ರಕ್ತವನ್ನು ಯಾವುದೇ ವ್ಯಕ್ತಿಗೆ ನೀಡುವ ಮೊದಲು ಪಡೆದ ರಕ್ತ ಮೇಲ್ಕಂಡ ರೋಗಗಳಿಂದ ಮುಕ್ತವಾಗಿದೆ ಎಂದು ತಿಳಿಸಲು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ರಕ್ತದಾನ ಮಾಡುವುದರಿಂದ ದಾನಿಗಳಿಗೆ ಆಗುವ ಪ್ರಯೋಜನಗಳು
ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಆಗುತ್ತದೆ.ದೇಹದಲ್ಲಿ ಹೊಸ ರಕ್ತ ಚಾಲನೆಯಿಂದ ಕಾರ್ಯತತ್ಪರತೆ. ಜ್ಞಾಪನ ಶಕ್ತಿ ವೃದ್ಧಿಯಾಗುತ್ತದೆ. ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುತ್ತದೆ. ಹೃದಯಾಘಾತವನ್ನು ಶೇ 80ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯವಾಗುತ್ತದೆ. ರಕ್ತದ ಒತ್ತಡ, ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ ಎಂದು ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿಗಳು ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...