ಸತ್ತಿದ್ದಾಳೆ ಎಂದುಕೊಂಡು ಶವಪೆಟ್ಟಿಗೆಯಲ್ಲಿಟ್ಟಿದ್ದ ಮಹಿಳೆ ದಿಢೀರನೆ ಎದ್ದು ಬಂದರೆ ಹೇಗಿರಬಹುದು ಹೇಳಿ? ಇಂಥದ್ದೇ ಒಂದು ಚಮತ್ಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈಕ್ವೆಡಾರ್‌ನ ವಯಸ್ಸಾದ ಮಹಿಳೆಯೊಬ್ಬಳು ಸತ್ತಿದ್ದಾಳೆಂದು ಆಸ್ಪತ್ರೆಯಲ್ಲಿ ಘೋಷಿಸಿದರು. ಅಂತ್ಯಕ್ರಿಯೆಗಾಗಿ ಆಕೆಯನ್ನ ಶವಪೆಟ್ಟಿಗೆಯೊಳಗೆ ತುಂಬಿದ್ದರು. ಆದರೆ ಇದ್ದಕ್ಕಿದ್ದಂತೆ ಆಕೆ ಶವಪೆಟ್ಟಿಗೆಯೊಳಗಿನಿಂದ ಥಟ್ಟನೆ ಬಡಿಯಲು ಪ್ರಾರಂಭಿಸಿದ್ದಾಳೆ. ಆಕೆಯ ಸಂಬಂಧಿಕರು ಅಕ್ಷರಶಃ ಆಘಾತಕ್ಕೊಳಗಾಗಿದ್ದಾರೆ.
ಈಕ್ವೆಡಾರ್ ಆರೋಗ್ಯ ಸಚಿವಾಲಯದ ಪ್ರಕಾರ ಮಹಿಳೆಯ ಹೆಸರು ಬೆಲ್ಲಾ ಮೊಂಟೊಯಾ. ಈಕೆ ನಿವೃತ್ತ ನರ್ಸ್ ಬಬಾಹೋಯೊದಲ್ಲಿನ ಮಾರ್ಟಿನ್ ಇಕಾಜಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದಳು. ಬೆಲ್ಲಾ ಮೊಂಟೊಯಾ ಪಾರ್ಶ್ವವಾಯು ಮತ್ತು ಹೃದಯ ಸ್ತಂಭನಕ್ಕೆ ಒಳಗಾಗಿದ್ದಳು. ರೋಗಿಯನ್ನು ಭೇಟಿ ಮಾಡಿದ ವೈದ್ಯರು ಆಕೆ ಸತ್ತಿದ್ದಾಳೆಂದು ಘೋಷಿಸಿ ಮರಣ ಪ್ರಮಾಣಪತ್ರ ನೀಡಿದ್ದಾರೆ. ಮೃತ ಮಹಿಳೆಯ ಅಂತ್ಯಕ್ರಿಯೆಯ ಮೆರವಣಿಗೆಗಳಿಗಾಗಿ ಕುಟುಂಬವು ಶವವನ್ನು ಮನೆಗೆ ಕರೆತಂದಿತು.
ಇದ್ದಕ್ಕಿದ್ದಂತೆ ಸಂಬಂಧಿಕರಿಗೆ ಶವಪೆಟ್ಟಿಗೆಯಿಂದ ವಿಚಿತ್ರವಾದ ಶಬ್ದ ಕೇಳಲಾರಂಭಿಸಿದೆ. ಭಯಭೀತರಾದ ಕುಟುಂಬ ಸದಸ್ಯರು ಮರದ ಪೆಟ್ಟಿಗೆಯನ್ನು ತೆರೆದಿದ್ದಾರೆ. ಶವಪೆಟ್ಟಿಗೆಯಲ್ಲಿದ್ದ ಮಹಿಳೆ ತೀವ್ರವಾಗಿ ಉಸಿರಾಡುತ್ತಿರುವುದನ್ನು ಗಮನಿಸಿದ್ದಾರೆ. ಸತ್ತಿದ್ದಾಳೆಂದು ಘೋಷಿಸಿ ಸುಮಾರು ಐದು ಗಂಟೆಗಳ ನಂತರ ಶವಪೆಟ್ಟಿಗೆಯಲ್ಲಿ ಶಬ್ದ ಕೇಳಿಬರಲಾರಂಭಿಸಿದೆ. ಪೆಟ್ಟಿಗೆಯನ್ನು ಬಡಿದು ತಾನು ಬದುಕಿದ್ದೇನೆಂದು ಆಕೆ ಸಂಬಂಧಿಕರಿಗೆ ಸಂದೇಶ ನೀಡಿದ್ದಾರೆ.
ನಂತರ ಕುಟುಂಬಸ್ಥರು ಆಕೆಯನ್ನು ಅದೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ಆಕೆ ಸತ್ತಿದ್ದಾಳೆ ಎಂದೇ ನಾವು ಭಾವಿಸಿದ್ದೇವೆಂದು ಹೇಳಿದ್ದಾರೆ. ‘ಮೃತ’ ಎಂದು ಘೋಷಿಸಿದ ಮಹಿಳೆ ಜೀವಂತವಾಗಿ ಪತ್ತೆಯಾಗಿರೋದು ಇದೇ ಮೊದಲೇನಲ್ಲ. ಈ ಹಿಂದೆ 2018 ರಲ್ಲಿ, ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ಶವಾಗಾರದ ಫ್ರಿಡ್ಜ್‌ನಲ್ಲಿ ಜೀವಂತವಾಗಿ ಪತ್ತೆಯಾಗಿದ್ದಳು.