ಬೆಂಗಳೂರು: ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಅರ್ಜಿ ಪ್ರಕ್ರಿಯೆ ಆರಂಭವಾಗಿಲ್ಲ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ ಮೊದಲ ವಾರ ಅವಕಾಶ ನೀಡುವುದಾಗಿ ಆಹಾರ ಇಲಾಖೆ ಹೇಳಿತ್ತು. ಆದರೆ ಇದುವರೆಗೆ ಆನ್ಲೈನ್ ಪೋರ್ಟಲ್ ಓಪನ್ ಆಗಿಲ್ಲ. ಸರ್ಕಾರದಿಂದ ಸೂಚನೆ ಬಾರದ ಹಿನ್ನೆಲೆಯಲ್ಲಿ ಪೋರ್ಟಲ್ ಓಪನ್ ಮಾಡಿಲ್ಲವೆಂದು ಹೇಳಲಾಗಿದೆ.
ಚುನಾವಣೆ ನೀತಿ ಸಂಹಿತೆ ಕಾರಣ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆ ಮತ್ತು ವಿತರಣೆ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ವೆಬ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆ ವಿಭಾಗ ಲಾಕ್ ಮಾಡಲಾಗಿದ್ದು, ಚುನಾವಣೆ ಮುಗಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಓಪನ್ ಮಾಡಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಅನರ್ಹರು ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುತ್ತಾರೆ ಎನ್ನುವ ಕಾರಣಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಬಿಪಿಎಲ್ ಕಾರ್ಡ್ ಮಾಡಿಸಲು ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಬಾರದು. ಎಪಿಎಲ್ ಕಾರ್ಡ್ ಗಳಿಗೆ ಯಾವುದೇ ನಿರ್ಬಂಧಗಳಿಲ್ಲ. ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಹೆಚ್ಚಿನ ಸಂಖ್ಯೆಯ ಜನ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಆದರೆ, http://ahara.kar.nic ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆ ವಿಭಾಗ ಲಾಕ್ ಮಾಡಲಾಗಿದೆ.