ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ಹೊಸ ನಿಯಮಾವಳಿ ಪ್ರಸ್ತಾಪಿಸಿದ್ದು, ವೈದ್ಯಕೀಯ ಪದವಿಗೆ ದೇಶಾದ್ಯಂತ ಏಕರೂಪ ಕೌನ್ಸೆಲಿಂಗ್ ನಡೆಸಲು ತಿಳಿಸಿದೆ.
ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಕೋರ್ಸ್ ಗಳ ಪ್ರವೇಶಕ್ಕೆ NEET –UG ಮೆರಿಟ್ ಪಟ್ಟಿ ಆಧರಿಸಿ ಏಕರೂಪ ಕೌನ್ಸೆಲಿಂಗ್ ಆಯೋಜಿಸುವ ಬಗ್ಗೆ ಹೊಸ ನಿಯಮಾವಳಿಯಲ್ಲಿ ಪ್ರಸ್ತಾಪಿಸಲಾಗಿದೆ. ‘ವೈದ್ಯಕೀಯ ಪದವಿ ಶಿಕ್ಷಣ ನಿಗಮಗಳು -ಜಿಎಂಇಆರ್ 2023’ ಎಂದು ಹೊಸ ನಿಯಮಗಳನ್ನು ಕರೆಯಲಾಗಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗ ಜೂನ್ 2 ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಆಯೋಗ ಒದಗಿಸಿದ ಸೀಟ್ ಮ್ಯಾಟ್ರಿಕ್ಸ್ ಆಧರಿಸಿ ಕೌನ್ಸೆಲಿಂಗ್ ನಡೆಸಲಾಗುವುದು. ಅಗತ್ಯವಿದ್ದಲ್ಲಿ ಹಲವು ಸುತ್ತುಗಳನ್ನು ಕೌನ್ಸೆಲಿಂಗ್ ಹೊಂದಬಹುದು ಎಂದು ಹೇಳಲಾಗಿದೆ.
ವೈದ್ಯಕೀಯ ಪದವಿ ಶಿಕ್ಷಣ ಮಂಡಳಿ ಸಾಮಾನ್ಯ ಕೌನ್ಸೆಲಿಂಗ್ ಮಾರ್ಗಸೂಚಿ ಹೊರಡಿಸುತ್ತದೆ. ಸರ್ಕಾರ ನೇಮಿಸುವ ಪ್ರಾಧಿಕಾರ ಈ ಮಾರ್ಗಸೂಚಿಗಳ ಅನ್ವಯವೇ ಕೌನ್ಸೆಲಿಂಗ್ ನಡೆಸಲಿದೆ. ಯಾವುದೇ ವೈದ್ಯಕೀಯ ಸಂಸ್ಥೆಗಳು ನಿಯಮಾವಳಿಗೆ ವಿರುದ್ಧವಾಗಿ ಪದವಿ ಶಿಕ್ಷಣ ಕೋರ್ಸ್ ಗೆ ಪ್ರವೇಶ ನೀಡುವಂತಿಲ್ಲ ಎಂದು ಹೇಳಲಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ನಿಯಮಾವಳಿಗಳಲ್ಲಿ ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ದೇಶದ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಪದವಿ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಸಾಮಾನ್ಯ ಕೌನ್ಸೆಲಿಂಗ್ ಸೆಷನ್ಗಳನ್ನು ನಡೆಸುವುದಾಗಿ ಪ್ರಸ್ತಾಪಿಸಿದೆ. ಇದು NEET-UG ಮೆರಿಟ್ ಪಟ್ಟಿಯನ್ನು ಆಧರಿಸಿದೆ. ಪ್ರಸ್ತುತ ನಿಬಂಧನೆಗಳು ಅಥವಾ ಇತರ NMC ನಿಯಮಗಳಲ್ಲಿ ಹೇಳಲಾದ ಯಾವುದಕ್ಕೂ ಪೂರ್ವಾಗ್ರಹವಿಲ್ಲದೆ, NEET-UG ಯ ಅರ್ಹತಾ ಪಟ್ಟಿಯ ಆಧಾರದ ಮೇಲೆ ಭಾರತದ ಎಲ್ಲಾ ವೈದ್ಯಕೀಯ ಸಂಸ್ಥೆಗಳಿಗೆ ವೈದ್ಯಕೀಯ ಪದವಿ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಸಾಮಾನ್ಯ ಕೌನ್ಸೆಲಿಂಗ್ ಇರುತ್ತದೆ ಎಂದು NMC ಹೇಳಿದೆ.