ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ತಮ್ಮ ಪುತ್ರಿ ಸುಪ್ರಿಯಾ ಸುಳೆ ಮತ್ತು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಘೋಷಿಸಿದ್ದಾರೆ.
ಸುಪ್ರಿಯಾ ಸುಳೆ ಅವರಿಗೆ ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಮಹಿಳಾ ಯುವಜನತೆ ಮತ್ತು ಲೋಕಸಭೆ ಸಮನ್ವಯದ ಜವಾಬ್ದಾರಿಯನ್ನು ನೀಡಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗೋವಾವನ್ನು ಪ್ರಫುಲ್ ಪಟೇಲ್ ನೋಡಿಕೊಳ್ಳಲಿದ್ದಾರೆ.
ತಮ್ಮ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ 25ನೇ ವಾರ್ಷಿಕೋತ್ಸವದಲ್ಲಿ ಶರದ್ ಪವಾರ್ ಈ ಘೋಷಣೆ ಮಾಡಿದರು. ಎನ್‌ಸಿಪಿಯ ಪ್ರಮುಖ ನಾಯಕ ಅಜಿತ್ ಪವಾರ್ ಅವರ ಸಮ್ಮುಖದಲ್ಲಿ ಈ ಘೋಷಣೆ ಮಾಡಲಾಗಿದೆ.
ಶರದ್ ಪವಾರ್ ಕಳೆದ ತಿಂಗಳು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು, ಅದರ ನಂತರ ಪಕ್ಷದ ಸದಸ್ಯರು ಮತ್ತು ಇತರ ರಾಜಕೀಯ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಎನ್‌ಸಿಪಿ ಸಮಿತಿಯು ಮೇ 5 ರಂದು ಅವರ ರಾಜೀನಾಮೆಯನ್ನು ತಿರಸ್ಕರಿಸಿತು ಮತ್ತು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ ಒತ್ತಾಯಿಸಿದ ಬಳಿಕ ಪವಾರ್ ಅಧ್ಯಕ್ಷರಾಗಿ ಮುಂದುವರೆಯಲು ಒಪ್ಪಿಕೊಂಡರು.