ಅಕ್ರಮವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಳ್ಳುವುದು ಅಥವಾ ವಿದ್ಯುತ್ ಕಳ್ಳತನ ದೇಶಾದ್ಯಂತ ಕಂಡುಬರುತ್ತದೆ. ನಿಯಮಾನುಸಾರ ಸಂಪರ್ಕ ತೆಗೆದುಕೊಳ್ಳದ ಕೆಲವರು ವಿದ್ಯುತ್ ಇಲಾಖೆಯ ಕಣ್ತಪ್ಪಿಸಿ ಅಕ್ರಮವಾಗಿ ಮನೆಗೆ ವಿದ್ಯುತ್ ಸಂಪರ್ಕ ಪಡೆದಿರುತ್ತಾರೆ. ಇಂಥವರನ್ನ ಕಂಡುಹಿಡಿಯುವುದು ವಿದ್ಯುತ್ ಇಲಾಖೆಗೆ ದೊಡ್ಡ ತಲೆನೋವು. ಏಕೆಂದರೆ ಪರಿಶೀಲನೆಗೆ ಅಧಿಕಾರಿಗಳು ಬಂದಿದ್ದಾರೆಂದು ತಿಳಿದ ತಕ್ಷಣ ಅಕ್ರಮದಾರರು ವಿದ್ಯುತ್ ಕಂಬಕ್ಕೆ ಹಾಕಿರುವ ವೈರ್ ತೆಗೆದು ತಾವೇನು ಅಕ್ರಮವೆಸಗಿಲ್ಲ ಎಂಬಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಇಂಥವರ ಮೇಲೆ ಕಣ್ಣಿಡುವುದು ತುಂಬಾ ಕಷ್ಟ. ಆದರೆ ಅಂಥವರ ಪತ್ತೆಗೆ ಉತ್ತರಪ್ರದೇಶ ಸರ್ಕಾರ ಆಗಸದಲ್ಲಿ ಕಣ್ಣಿಟ್ಟಿದೆ. ಅಕ್ರಮವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಂಡಿರುವವರ ಪತ್ತೆಗೆಂದೇ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಡ್ರೋಣ್ ಗಳನ್ನು ಬಿಟ್ಟಿದೆ. ಜನವಸತಿ ಪ್ರದೇಶದಲ್ಲಿರುವ ಈ ಡ್ರೋಣ್ ಗಳು ಜನ ವಿದ್ಯುತ್ ಕಳ್ಳತನ ಮಾಡುವುದನ್ನ ಮತ್ತು ಅಧಿಕಾರಿಗಳು ಬಂದಾಗ ಅದನ್ನ ಮರೆಮಾಚಲು ವಿದ್ಯುತ್ ಲೈನ್ ನಿಂದ ಸಂಪರ್ಕ ತೆಗೆದುಕೊಂಡಿರುವ ವೈರ್ ತೆಗೆಯುವುದನ್ನೆಲ್ಲಾ ಸೆರೆಹಿಡಿದಿದೆ. ಈ ವಿಡಿಯೋಗಳು ಗಮನ ಸೆಳದಿದ್ದು ವೈರಲ್ ಆಗಿವೆ.