ಧಾರವಾಡ/ಬೆಳಗಾವಿ: ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯಾಗಿರುವುದನ್ನು ಖಂಡಿಸಿ ರಾಜ್ಯದಲ್ಲಿ ಜನರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಉದ್ದಿಮೆಗಳ ಸಂಘಟನೆಗಳು, ನೇಕಾರ ಸಂಘ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿರುವ ಉದ್ಯಮಗಳ ಸಂಘ, ತಕ್ಷಣ ವಿದ್ಯುತ್ ದರ ಏರಿಕೆ ಆದೇಶ ಹಿಂಪಡೆಯುವಂತೆ ಆಗ್ರಹಿಸಿವೆ. ಈ ಹಿಂದೆ ಯೂನಿಟ್ ಗೆ 95 ರೂಪಾಯಿ ಇತ್ತು. ಈಗ 140 ರೂ ಆಗಿದೆ. ಯೂನಿಟ್ ಗೆ 45 ರೂ ಏರಿಕೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ನೇಕಾರ ಸೇವಾ ಸಂಘ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಚುನಾವಣೆವರೆಗೂ ಸರಿಯಿದ್ದ ವಿದ್ಯುತ್ ದರ ಈಗ ಫಲಿತಾಂಶ ಬಂದ ಕೆಲ ದಿನಗಳಲ್ಲೇ ಹೆಚ್ಚಳ ವಾಗಿದೆ. ಕೆಇಆರ್ ಸಿ ಆದೇಶಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ತಕ್ಷಣ ತಡೆ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ.