ಬೆಂಗಳೂರು: ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಗರಂ ಆಗಿದ್ದಾರೆ.
ಮಾಜಿ ಸಚಿವ ಸುಧಾಕರ್ ಅವರನ್ನು ಟಾರ್ಗೆಟ್ ಮಾಡಿದ ಎಂಟಿಬಿ ನಾಗರಾಜ್ ಸೋಲಿಗೆ ಸುಧಾಕರ್ ಅವರೇ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ನಲ್ಲಿದ್ದಾಗ ಮೂರು ಬಾರಿ ಗೆದ್ದಿದ್ದೇನೆ. ಬಿಜೆಪಿ ಸೇರಿ ಎರಡು ಬಾರಿ ಸ್ಪರ್ಧಿಸಿ ಎರಡು ಬಾರಿ ಸೋತಿದ್ದೇನೆ. ಸುಧಾಕರ್ ಅವರಿಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೀಡಿದರು. ಚುನಾವಣೆಯಲ್ಲಿ ಆತನು ಸೋತ, ನಮ್ಮನ್ನೂ ಸೋಲಿಸಿದ. ಉಸ್ತುವಾರಿ ಸಚಿವ ಸ್ಥಾನವನ್ನು ಸುಧಾಕರ್ ಸರಿಯಾಗಿ ನಿಭಾಯಿಸಿಲ್ಲ. ನನ್ನ ಮತ್ತು ಚಿಂತಾಮಣಿ ಅಭ್ಯರ್ಥಿ ಸೋಲಿಗೆ ಸುಧಾಕರ್ ಕಾರಣ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
40% ಆರೋಪಕ್ಕೆ ಕೌಂಟರ್ ಅಟ್ಯಾಕ್ ಮಾಡಲಿಲ್ಲ. ನಾವು ಕೇವಲ ಸಿದ್ದರಾಮಯ್ಯನವರಿಗೆ ಮಾತ್ರ ಬೈದೆವು. ಚುನಾವಣೆ ವೇಳೆ ಅಕ್ಕಿ ಕಡಿಮೆ ಮಾಡಿದ್ದು ಕೂಡ ಸೋಲಿಗೆ ಪ್ರಮುಖ ಕಾರಣ. ಕಾರ್ಯಕರ್ತರನ್ನು ಸಚಿವರು ಗಣನೆಗೆ ತೆಗೆದುಕೊಳ್ಳಲಿಲ್ಲ. ಕಾರ್ಯಕರ್ತರ ಆಗು ಹೋಗುಗಳ ಬಗ್ಗೆ ಉಸ್ತುವಾರಿಗಳು ಗಮನಿಸಲಿಲ್ಲ. ಸುಧಾಕರ್ ಅವರಿಂದಾಗಿಯೇ ನಾನು ಸೋತಿದ್ದು. 10 ಕೆಜಿ ಅಕ್ಕಿ ಗ್ಯಾರಂಟಿ ಕೂಡ ಸೋಲಿಗೆ ಕಾರಣವಾಯಿತು ಎಂದು ಎಂಟಿಬಿ ಹೇಳಿದ್ದಾರೆನ್ನಲಾಗಿದೆ.