ನವದೆಹಲಿ : ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ದುರಂತದ (Odisha train accident) ತನಿಖೆಯನ್ನು ಕೇಂದ್ರ ತನಿಖಾ ದಳ (CBI) ವಹಿಸಿಕೊಂಡಿದೆ ಮತ್ತು ತನಿಖೆ ನಡೆಸಲು ಒಂದು ತಂಡ ಇಂದು ಅಪಘಾತದ ಸ್ಥಳಕ್ಕೆ ತಲುಪಿದೆ.
ರೈಲು ದುರಂತದ ಕುರಿತಂತೆ ಸಿಬಿಐ ಇಂದು ಎಫ್ ಐ ಆರ್ (FIR) ದಾಖಲಿಸಿಕೊಂಡಿದ್ದು, ರೈಲು ದುರಂತಕ್ಕೆ ಕಾರಣವಾಗುವ ಉದ್ದೇಶಪೂರ್ವಕ ಪ್ರಯತ್ನಗಳು ಸೇರಿದಂತೆ ಎಲ್ಲಾ ಸಂಭವನೀಯ ಕಾರಣಗಳನ್ನು ಸಿಬಿಐ ಪರಿಶೀಲಿಸುತ್ತಿದೆ.
ಕೋರಮಂಡಲ್ ಎಕ್ಸ್ಪ್ರೆಸ್, ಯಶವಂತಪುರ-ಹೌರಾ ಎಕ್ಸ್ಪ್ರೆಸ್ ಮತ್ತು ಒಡಿಶಾ ರಾಜ್ಯದ ಬಹನಾಗ ಬಜಾರ್ನಲ್ಲಿ ಜೂನ್ 2 ರಂದು ಸಂಭವಿಸಿದ ಗೂಡ್ಸ್ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯ, ಒಡಿಶಾ ಸರ್ಕಾರದ ಒಪ್ಪಿಗೆ ಮತ್ತು ಡಿಒಪಿಟಿ (ಸಿಬ್ಬಂದಿ ಮತ್ತು ತರಬೇತಿ ಇಲಾಖೆ) ಯ ಆದೇಶದ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಈ ಅಪಘಾತಕ್ಕೆ ಸಂಬಂಧಿಸಿದಂತೆ ಬಾಲಸೋರ್ ಸರ್ಕಾರಿ ರೈಲ್ವೆ ಪೊಲೀಸ್ (GRP), ಕಟಕ್ (ಒಡಿಶಾ) ಪ್ರಕರಣ ಸಂಖ್ಯೆ 64 ರಲ್ಲಿ ಈ ಹಿಂದೆ ದಾಖಲಾದ ಪ್ರಕರಣದ ತನಿಖೆಯನ್ನು ಏಜೆನ್ಸಿ ವಹಿಸಿಕೊಂಡಿದೆ. ಸಿಬಿಐ ತಂಡವು ಬಾಲಸೋರ್ ತಲುಪಿದೆ ಎಂದು ಅವರು ಹೇಳಿದರು. ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ 275 ಮಂದಿ ಸಾವನ್ನಪ್ಪಿದ್ದು, 1000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.