ಬೆಳಗಾವಿ: ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಉಗ್ರ ಹೋರಾಟ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ 5 ವರ್ಷ ಹೋರಾಟವೇ ಕೆಲಸ. ಇನ್ನೇನು ಕೆಲಸವಿದೆ? ಎಂದು ಪ್ರಶ್ನಿಸಿದರು.
ಇನ್ನು ಐದು ವರ್ಷಗಳ ಕಾಲ ಅವರಿಗೆ ಕೆಲಸವಿಲ್ಲ. ಹೋರಾಟ ಹೋರಾಟ ಎಂದು ಬೋರ್ಡ್ ಹಿಡಿದು ಹೋರಾಡೋದು. ಬರಿ ಕೋಮುದ್ವೇಷ ಹರಡಿಸೋದು, ಗಲಾಟೆ, ಒಬ್ಬರ ವಿರುದ್ಧ ಒಬ್ಬರನ್ನು ಎತ್ತಿಕಟ್ಟುವುದು ಇಷ್ಟೇ ಬಿಜೆಪಿ ನಾಯಕರಿಗೆ ಗೊತ್ತಿರುವುದು ಎಂದರು.
ಎಮ್ಮೆ, ಕೋಣ ಕಡಿಯುವುದಾದರೆ ಹಸು ಏಕೆ ಕಡಿಯಬಾರದು ಎಂಬ ಸಚಿವ ವೆಂಕಟೇಶ್ ಹೇಳಿಕೆ ವಿಚಾರವಾಗಿ ಸಚಿವರ ಹೇಳಿಕೆ ಬಗ್ಗೆ ಚರ್ಚಿಸಲು ಅವಕಾಶವಿದೆ. ಚರ್ಚಿಸಲು ಸದನವಿದೆ ಎಂದು ಹೇಳಿದರು.