ನವದೆಹಲಿ : ಒಡಿಶಾದ (Odisha) ಬಾಲಸೋರ್ ಜಿಲ್ಲೆಯಲ್ಲಿ ನಡೆದ ರೈಲು ದುರಂತದ (Train accident) ಕುರಿತಂತೆ ರೈಲ್ವೆ ಮಂಡಳಿ ಸದಸ್ಯೆ (Member of Operation and Business Development, Railway Board) ಜಯವರ್ಮ ಸಿನ್ಹಾ (Jaya Varma Sinha) ಮಾಹಿತಿ ನೀಡಿದ್ದು, ರೈಲ್ವೆ ಸಿಗ್ನಲ್ ಸಮಸ್ಯೆಯಿಂದ ರೈಲು ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರೈಲು ದುರಂತ ಶುಕ್ರವಾರ ಸಂಜೆ 6.55 ರ ಸುಮಾರಿಗೆ ನಡೆದಿದ್ದು, ಬೆಂಗಳೂರು-ಹೌರಾ ಎಕ್ಸ್ ಪ್ರೆಸ್ ರೈಲಿನ 2 ಬೋಗಿ ಹಳಿ ತಪ್ಪಿತ್ತು. ದುರಂತದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಕೋರಮಂಡಲ ಎಕ್ಸ್ ಪ್ರೆಸ್ ರೈಲು 128 ಕಿ.ಮೀ ವೇಗದಲ್ಲಿತ್ತು. ಬೆಂಗಳೂರು-ಹೌರಾ ಎಕ್ಸ್ ಪ್ರೆಸ್ ರೈಲು 126 ಕಿ.ಮೀ ವೇಗದಲ್ಲಿತ್ತು. 2 ರೈಲುಗಳು ಬಹಳ ವೇಗವಾಗಿ ಚಲಿಸುತ್ತಿದ್ದವು. ಕೋರಮಂಡಲ ರೈಲಿಗೆ ತೀವ್ರ ಪ್ರಮಾಣದ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಗೂಡ್ಸ್ ರೈಲು ಹಳಿ ತಪ್ಪಲಿಲ್ಲ. ಗೂಡ್ಸ್ ರೈಲು ಕಬ್ಬಿಣದ ಅದಿರುಗಳನ್ನು ಸಾಗಿಸುತ್ತಿದ್ದ ಪರಿಣಾಮದ ಗರಿಷ್ಠ ಹಾನಿಯು ಕೋರಮಂಡಲ್ ಎಕ್ಸ್ ಪ್ರೆಸ್ ರೈಲಿಗೆ ಆಗಿದೆ. ಇದು ಹೆಚ್ಚಿನ ಸಂಖ್ಯೆಯ ಸಾವುಗಳು ಮತ್ತು ಗಾಯಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.