alex Certify ಒಡಿಶಾ ರೈಲು ದುರಂತ: ಕವಚ್‌ ಸುರಕ್ಷತಾ ವ್ಯವಸ್ಥೆ ಇದ್ದಿದ್ದರೇ ತಪ್ಪುತ್ತಿತ್ತೇ ಶುಕ್ರವಾರದ ದುರಂತ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಿಶಾ ರೈಲು ದುರಂತ: ಕವಚ್‌ ಸುರಕ್ಷತಾ ವ್ಯವಸ್ಥೆ ಇದ್ದಿದ್ದರೇ ತಪ್ಪುತ್ತಿತ್ತೇ ಶುಕ್ರವಾರದ ದುರಂತ…..?

ಒಡಿಶಾದಲ್ಲಿ ಶುಕ್ರವಾರ ಸಂಜೆ ಜರುಗಿದ ಘೋರ ರೈಲು ದುರಂತವು ರೈಲ್ವೇ ಸುರಕ್ಷತೆ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶ್ನೆಗಳನ್ನು ಎಬ್ಬಿಸಿದೆ. ರೈಲು ಪ್ರಯಾಣವನ್ನು ಇನ್ನಷ್ಟು ಸುರಕ್ಷಿತವಾಗಿಸಲು ’ಕವಚ್’ ಅಫಘಾತ ನಿರೋಧಕ ವ್ಯವಸ್ಥೆ ಪರಿಚಯಿಸಿದ್ದ ಕೇಂದ್ರ ಇದನ್ನು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ತಂದಿದೆ ಎಂಬ ಪ್ರಶ್ನೆಗಳು ಎದ್ದಿವೆ.

’ಸ್ವಯಂ ಚಾಲಿತ ರೈಲು ಸುರಕ್ಷತಾ ವವ್ಯಸ್ಥೆ’ಯಾದ ಕವಚ್‌‌ನ ಅಭಿವೃದ್ಧಿಯಾಗಿ 10 ವರ್ಷಗಳು ಕಳೆದರೂ ಸಹ ದೇಶಾದ್ಯಂತ ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ವಿಫವಾಗಿರುವ ಕುರಿತು ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಮೊನ್ನಿನ ಅಫಘಾತವನ್ನು ತಡೆಗಟ್ಟಬಹುದಾಗಿದ್ದ ಕವಚ್‌‌ ಅನ್ನು ಸದ್ಯದ ಮಟ್ಟಿಗೆ 1,455 ಕಿಮೀನಷ್ಟು ಹಳಿಗಳ ಮೇಲಷ್ಟೇ ಅಳವಡಿಸಲಾಗಿದ್ದು, ಶುಕ್ರವಾರ ಅಫಘಾತ ಸಂಭವಿಸಿದ ಮಾರ್ಗದಲ್ಲಿ ಇನ್ನೂ ಅಳವಡಿಸಿಲ್ಲ.

ಒಂದು ವೇಳೆ ಈ ಕವಚ್‌ ವ್ಯವಸ್ಥೆಯನ್ನು ಇದೇ ಮಾರ್ಗ ಹಾಗೂ ರೈಲುಗಳಲ್ಲಿ ಅಳವಡಿಸಿದ್ದೇ ಆಗಿದ್ದಲ್ಲಿ, ಮೊನ್ನಿನ ಅಫಘಾತದ ಸಾಧ್ಯತೆ ಬಹಳ ಕಡಿಮೆ ಇರುತ್ತಿತ್ತು ಹಾಗೂ ಒಂದು ವೇಳೆ ಅವಘಡ ಸಂಭವಿಸಿದ್ದರೂ ಈ ಮಟ್ಟದ ಅನಾಹುತ ಸಂಭವಿಸುತ್ತಿರಲಿಲ್ಲ.

ಮುಖ್ಯ ಲೈನ್‌ನಲ್ಲಿ ಚಲಿಸಬೇಕಿದ್ದ ಕೊರೊಮಂಡಲ್ ಎಕ್ಸ್‌ಪ್ರೆಸ್ ರೈಲು ಸಿಗ್ನಲ್ ವ್ಯವಸ್ಥೆಯಲ್ಲಿ ಆದ ಎಡವಟ್ಟಿನ ಕಾರಣ ಲೂಪ್‌ ಲೈನ್‌‌ಗೆ ಆಗಮಿಸಿ, ಅಲ್ಲಿ ನಿಂತಿದ್ದ ಸರಕು ರೈಲಿಗೆ ಢಿಕ್ಕಿ ಹೊಡೆದಿದೆ. ಇದರ ಬೆನ್ನಿಗೇ ಬಂದ ಯಶವಂತಪುರ – ಹೌರಾ ಎಕ್ಸ್‌ಪ್ರೆಸ್ ರೈಲು ಕೊರೊಮಂಡಲ್ ಎಕ್ಸ್‌ಪ್ರೆಸ್‌ನ ಹಳಿ ತಪ್ಪಿದ್ದ ಬೋಗಿಗಳಿಗೆ ಢಿಕ್ಕಿ ಹೊಡೆದಿದೆ.

ಆದರೆ ಇಂಥ ಅವಘಡಗಳಲ್ಲಿ ಕವಚ್‌ ವ್ಯವಸ್ಥೆ ಸಹ ಕೆಲಸಕ್ಕೆ ಬರುವುದು ಅನುಮಾನ ಎಂದು ಇಂಟೆಗ್ರಲ್ ಕೋಚ್‌ ಕಾರ್ಖಾನೆಯ ಮಾಜಿ ಜಿಎಂ ಸುಧಾಂಶು ಮಣಿ. ಒಂದು ವೇಳೆ ಲೋಕೋ ಪೈಲಟ್ ಸಿಗ್ನಲ್‌ ಜಂಪ್ ಮಾಡಿ ಸಾಗಿದ್ದರೆ ರೈಲಿನ ವೇಗವನ್ನು ತನ್ನಿಂತಾನೇ ಕಡಿಮೆ ಮಾಡಿ, ನಿಲುಗಡೆಗೆ ತರುವ ಕವಚ್‌‌, ರೈಲು ಹಳಿ ತಪ್ಪಿದ ಸಂದರ್ಭಗಳಲ್ಲಿ ಕೆಲಸ ಮಾಡದು ಎನ್ನುತ್ತಾರೆ ಮಣಿ.

ರೈಲು ಹಳಿ ತಪ್ಪಿ ಅದರ ಬೋಗಿಗಳು ಮತ್ತೊಂದು ಹಳಿ ಮೇಲೆ ಬಿದ್ದ ಸಂದರ್ಭದಲ್ಲಿ ಕವಚ್‌ನ ಸಹಾಯ ತೀರಾ ನಗಣ್ಯವಾಗಿರುತ್ತದೆ, ಏಕೆಂದರೆ ಹಳಿಗಳ ಮೇಲೆ ರೈಲಿನ ಅವಶೇಷಗಳು ಇರುವ ಕಾರಣ ಹಳಿಗಳು ಶಾರ್ಟ್ ಸರ್ಕ್ಯೂಟ್ ಆಗಿರುವ ಕಾರಣಕ್ಕೆ ಸಂಪರ್ಕ ವ್ಯವಸ್ಥೆ ಧ್ವಂಸಗೊಂಡು, ಆ ಮಾರ್ಗದಲ್ಲಿ ಬರುವ ಇತರೆ ರೈಲುಗಳಿಗೆ ಎಚ್ಚರಿಕೆ ರವಾನೆ ಮಾಡುವಲ್ಲಿ ಕವಚ್‌ ವಿಫಲವಾಗುತ್ತದೆ.

ರೈಲುಗಳು, ಹಳಿಗಳು ಹಾಗೂ ಸಿಗ್ನಲ್ ವ್ಯವಸ್ಥೆಗಳಲ್ಲಿ ಅಳವಡಿಸಿದ ಎಲೆಕ್ಟ್ರಾನಿಕ್ ಹಾಗೂ ರೇಡಿಯೋ ತರಂಗಾಂತರಗಳ ಮೇಲೆ ಕವಚ್‌ ಅವಲಂಬಿತವಾಗಿರುತ್ತದೆ. ಹಳಿಗಳಿಗೆ ಯಾವುದೇ ರೀತಿಯ ಹಾನಿಯಾಗದೇ ಇದ್ದಲ್ಲಿ ಮಾತ್ರವೇ ಅದರ ಮೇಲಿನ ಯಾವುದಾದರೂ ಅಡೆತಡೆಗಳಿದ್ದಲ್ಲಿ ಕವಚ್‌ ಪತ್ತೆ ಮಾಡುತ್ತದೆ. ಇಂಥ ಸಂಧರ್ಭಗಳಲ್ಲಿ ಲೋಕೋಪೈಲಟ್‌ರ ದೃಷ್ಟಿ ತೀಕ್ಷ್ಣತೆ ಹಾಗೂ ಸಮಯ ಪ್ರಜ್ಞೆಯೇ ಅವಘಡಗಳನ್ನು ತಪ್ಪಿಸಬೇಕಾಗುತ್ತದೆ.

2011-12ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿದ್ದ ರೈಲ್ವೇ ಸಚಿವಾಲಯ ಪರಿಚಯಿಸಿದ್ದ ರೈಲು ಅವಘಡ ತಡೆ ವ್ಯವಸ್ಥೆಗೆ (ಟಿಸಿಎಎಸ್) 2020ರಲ್ಲಿ ನರೇಂದ್ರ ಮೋದಿ ಸರ್ಕಾರ ಕವಚ್‌ ಎಂದು ಮರುನಾಮಕರಣ ಮಾಡಿದೆ. ದೇಶದ 35,000+ ಕಿಮೀನಷ್ಟು ರೈಲ್ವೇ ಜಾಲವನ್ನು ರಾಷ್ಟ್ರೀಯ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆ (ಕವಚ್‌) ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ.

ಮಾರ್ಚ್ 29, 2023ರಂದು ಸಂಸತ್ತಿಗೆ ಉತ್ತರ ನೀಡುವ ವೇಳೆ, ದೇಶದ 1,455ಕಿಮೀ ರೈಲ್ವೇ ಜಾಲವನ್ನು ಕವಚ್‌ ವ್ಯಾಪ್ತಿಗೆ ತರಲಾಗಿದ್ದು, ಇದರಲ್ಲಿ ಮಹಾರಾಷ್ಟ್ರದಲ್ಲಿಯೇ 576ಕಿಮೀ ಸೇರಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದರು. ಈ ಅಳವಡಿಕೆಯ ವಿಚಾರದಲ್ಲಿ ಆಗಸ್ಟ್‌ 2022 ಹಾಗೂ ಮಾರ್ಚ್ 2023ರ ನಡುವೆ ಯಾವುದೇ ಪ್ರಗತಿ ಸಾಧಿಸಲು ಆಗಿಲ್ಲ.

ದೆಹಲಿ – ಮುಂಬಯಿ ಹಾಗೂ ದೆಹಲಿ – ಹೌರಾ ಕಾರಿಡಾರುಗಳಲ್ಲಿ ಕವಚ್‌ ವ್ಯವಸ್ಥೆಯ ಅಳವಡಿಕೆಗೆ ಟೆಂಡರ್‌ಗಳನ್ನು ಕರೆಯಲಾಗಿದ್ದು, ಮಾರ್ಚ್ 2024ರ ವೇಳೆಗೆ ಕೆಲಸ ಪೂರ್ಣಗೊಳ್ಳಲಿದೆ ಎಂದು ವೈಷ್ಣವ್‌ ತಿಳಿಸಿದ್ದಾರೆ.

“ಕವಚ್‌ ತಂತ್ರಜ್ಞಾನದ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲು ಹಾಗೂ ದೇಶವ್ಯಾಪಿ ಅಳವಡಿಕೆಗೆ ದೊಡ್ಡ ಪ್ರಮಾಣದಲ್ಲಿ ಹಣ ಹೊಂದಿಸಬೇಕಾದ ಕಾರಣ, ದೇಶಾದ್ಯಂತ ಈ ತಂತ್ರಜ್ಞಾನ ಅಳವಡಿಕೆಗೆ ಇನ್ನೂ ಎರಡು ವರ್ಷಗಳು ಬೇಕಾಗಬಹುದು,” ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕವಚ್‌ ವ್ಯವಸ್ಥೆಯು ಯೂರೋಪಿಯನ್ ರೈಲು ನಿಯಂತ್ರಣ ವ್ಯವಸ್ಥೆಯ 2ನೇ ಹಂತಕ್ಕಿಂತಲೂ ಸುಧಾರಿತವಾಗಿದೆ ಎಂದು 2023ರ ಜಾಗತಿಕ ಉದ್ಯಮ ಶೃಂಗದಲ್ಲಿ ತಿಳಿಸಿದ್ದ ಅಶ್ವಿನಿ ವೈಷ್ಣವ್‌, ಮುಂದಿನ ದಿನಗಳಲ್ಲಿ ಕವಚ್‌ ಮಾದರಿಯನ್ನು ಜಗತ್ತಿನಾದ್ಯಂತ ಅವಳಡಿಕೆಯಾಗುವುದನ್ನು ನೋಡಬಹುದಾಗಿದೆ ಎಂದಿದ್ದು.

ಮತ್ತೊಂದು ಮೂಲದ ಪ್ರಕಾರ, ಒಂದು ವೇಳೆ ಕವಚ್‌ ವ್ಯವಸ್ಥೆ ಈ ಮಾರ್ಗದಲ್ಲಿ ಇದ್ದಿದ್ದರೆ ಯಶವಂತಪುರ – ಹೌರಾ ರೈಲಿನ ಬ್ರೇಕಿಂಗ್ ವ್ಯವಸ್ಥೆ ಮೂಲಕ ಈ ದುರ್ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲೇ ಆ ರೈಲನ್ನು ನಿಲ್ಲಿಸುತ್ತಿತ್ತು. “120ಕಿಮೀ/ಗಂಟೆಗೆ ಚಲಿಸುವ ರೈಲನ್ನು ನಿಲ್ಲಿಸಲು ಕನಿಷ್ಠ ಒಂದು ಕಿಮೀ ಅಂತರ ಬೇಕಾಗುತ್ತದೆ,” ಎಂದು ಅನಾಮಧೇಯ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2022ರ ಬಜೆಟ್‌ನಲ್ಲಿ ಕವಚ್‌ ತಂತ್ರಜ್ಞಾನ ಉತ್ಪಾದನೆಯನ್ನು ’ಆತ್ಮನಿರ್ಭರತೆ’ ಅಡಿಗೆ ತರಲಾಗಿದೆ.

“ವೇಗ ನಿಯಂತ್ರಣಗಳಿಗೆ ಅನುಸಾರವಾಗಿ ರೈಲಿನ ವೇಗ ನಿಯಂತ್ರಣ ಮಾಡಲು ಲೋಕೋ ಪೈಲಟ್ ವಿಫಲರಾದಲ್ಲಿ, ಕವಚ್‌ ವ್ಯವಸ್ಥೆ ಈ ಕೆಲಸವನ್ನು ಸ್ವಯಂಚಾಲಿತವಾಗಿ ಮಾಡಲಿದೆ. ಅಲ್ಲದೇ, ಸಕ್ರಿಯ ಕವಚ್‌ ವ್ಯವಸ್ಥೆ ಹೊಂದಿರುವ ಎರಡು ರೈಲುಗಳ ನಡುವಿನ ಅವಘಡವೂ ತಪ್ಪಲಿದೆ,” ಎಂದು ಕವಚ್‌ ಕುರಿತಾದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಸುರಕ್ಷತಾ ಸಮಗ್ರತೆ ಮಟ್ಟ 4 (ಎಸ್‌ಐಎಲ್-4) ಬಳಕೆ ಮಾಡುವ ಕವಚ್‌ನ ಬಳಕೆ ವೇಳೆ ತಾಂತ್ರಿಕ ದೋಷದ ಸಾಧ್ಯತೆ 10,000 ವರ್ಷಗಳಲ್ಲಿ ಒಮ್ಮೆ ಎನಿಸುವಷ್ಟು ವಿರಳವಾಗಿದೆ.

ಕವಚ್‌ನ ಪ್ರಯೋಗಾರ್ಥ ಪರೀಕ್ಷೆಯೊಂದರ ವೇಳೆ, ಸ್ವಯಂಚಾಲಿತ ಬ್ರೇಕಿಂಗ್ ವ್ಯವಸ್ಥೆ ಮೂಲಕ ಒಂದೇ ಹಳಿಯಲ್ಲಿ ವಿರುದ್ಧ ದಿಕ್ಕುಗಳಿಂದ ಬರುತ್ತಿದ್ದ ಎರಡು ರೈಲುಗಳು 380 ಮೀ ಪರಸ್ಪರ ಅಂತರದಲ್ಲಿ ನಿಂತಿವೆ. ಲೂಪ್ ಲೈನ್‌ಗೆ ಆಗಮಿಸುತ್ತಲೇ ರೈಲಿನ ವೇಗವನ್ನು ಕವಚ್‌ ತನ್ನಿಂತಾನೇ ಕಡಿಮೆ ಮಾಡಿದೆ.

ಎಲೆಕ್ಟ್ರಾನಿಕ್ ಹಾಗೂ ರೇಡಿಯೋ ತರಂಗಾಂತರಗಳನ್ನು ರವಾನೆ ಹಾಗೂ ಸ್ವೀಕಾರ ಮಾಡುವ ಸಾಧನಗಳನ್ನು ಸಿಗ್ನಲ್, ಹಳಿಗಳು ಹಾಗೂ ಇಂಜಿನ್‌ಗಳಲ್ಲಿ ಅಳವಡಿಕೆ ಮಾಡುವ ಮೂಲಕ ಕವಚ್‌ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಈ ಸಾಧನಗಳು ರೇಡಿಯೋ ತರಂಗಾತರಗಳ ಮೂಲಕ ಪರಸ್ಪರ ಸಂಪರ್ಕ ಸಾಧಿಸುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...