ಶುಕ್ರವಾರ ರಾತ್ರಿ ಬಾಲಸೋರ್‌ನಲ್ಲಿ ನಡೆದ ಭೀಕರ ಮೂರು ರೈಲು ಅಪಘಾತಕ್ಕೆ ಕಾರಣವೇನು ಎನ್ನುವುದು ಪ್ರಾಥಮಿಕ ತನಿಖಾ ವರದಿಯಲ್ಲಿ ಗೊತ್ತಾಗಿದೆ.
ಕೋರಮಂಡಲ್ ಎಕ್ಸ್ ಪ್ರೆಸ್ ಮುಖ್ಯ ಮಾರ್ಗದ ಬದಲು ಲೂಪ್ ಲೈನ್ ಗೆ ಪ್ರವೇಶಿಸಿ ಅಲ್ಲಿ ಈಗಾಗಲೇ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖಾ ವರದಿ ಶನಿವಾರ ಬಹಿರಂಗಪಡಿಸಿದೆ.
ಎರಡು ಪ್ರಯಾಣಿಕ ರೈಲುಗಳಾದ ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಮತ್ತು ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್ ಪ್ರೆಸ್ ಮತ್ತು ಗೂಡ್ಸ್ ರೈಲು ಒಳಗೊಂಡ ಅಪಘಾತದಲ್ಲಿ ಕನಿಷ್ಠ 280 ಜನರು ಸಾವನ್ನಪ್ಪಿದ್ದು, 900 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಪ್ರಾಥಮಿಕ ತನಿಖಾ ಮಾಹಿತಿಯಂತೆ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಮುಖ್ಯಮಾರ್ಗದ ಬದಲಿಗೆ ಲೂಪ್ ಲೈನ್ ಪ್ರವೇಶಿಸಿ ಬಹಾನಗರ್ ಬಜಾರ್ ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೋರಮಂಡಲ್ ಎಕ್ಸ್ ಪ್ರೆಸ್ ಬೋಗಿಗಳು ಚೆಲ್ಲಿಯಾಗಿ ಪಕ್ಕದ ಹಳಿಗಳ ಮೇಲೆ ಬಿದ್ದಿವೆ. ಆ ಬೋಗಿಗಳಿಗೆ ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದು ಬೋಗಿಗಳು ಉರುಳಿಬಿದ್ದಿವೆ.
ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಗಂಟೆಗೆ 128 ಕಿಲೋಮೀಟರ್, ಬೆಂಗಳೂರು -ಹೌರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಗಂಟೆಗೆ 116 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದವು. ಸುಮಾರು 2000ಕ್ಕೂ ಅಧಿಕ ಪ್ರಯಾಣಿಕರುಈ ರೈಲುಗಳಲ್ಲಿ ಇದ್ದರು.
ಭಾರತೀಯ ರೈಲ್ವೆ ಹೆಚ್ಚು ರೈಲುಗಳಿಗೆ ಮತ್ತು ಸುಗಮ ಕಾರ್ಯಾಚರಣೆಗಾಗಿ ನಿಲ್ದಾಣದ ಪ್ರದೇಶದಲ್ಲಿ ಲೂಪ್ ಲೈನ್ ಗಳನ್ನು ನಿರ್ಮಿಸಲಾಗಿದೆ. ಲೂಪ್ ಲೈನ್‌ಗಳು ಸಾಮಾನ್ಯವಾಗಿ 750 ಮೀಟರ್ ಉದ್ದವಿದ್ದು, ಬಹು ಇಂಜಿನ್ ಗಳೊಂದಿಗೆ ಪೂರ್ಣ-ಉದ್ದದ ಸರಕು ರೈಲುಗಳಿಗೆ ಅವಕಾಶ ಕಲ್ಪಿಸುತ್ತದೆ.
ಕೋರಮಂಡಲ್ ಎಕ್ಸ್ ಪ್ರೆಸ್‌ಗೆ ದಾರಿ ಮಾಡಿಕೊಡಲು ಗೂಡ್ಸ್ ರೈಲನ್ನು ಲೂಪ್ ಲೈನ್‌ನಲ್ಲಿ ಇರಿಸಿರಬಹುದು.
ಕೋರಮಂಡಲ್ ಎಕ್ಸ್ ಪ್ರೆಸ್ ಮುಖ್ಯ ಮಾರ್ಗದ ಮೂಲಕ ಹಾದುಹೋಗಲು ಸಂಕೇತವನ್ನು ನೀಡಲಾಯಿತು. ಆದರೆ ಹಳಿಗಳು ಕೋರಮಂಡಲ್ ಎಕ್ಸ್ ಪ್ರೆಸ್ ಅನ್ನು ಗೂಡ್ಸ್ ರೈಲು ನಿಲುಗಡೆ ಮಾಡಿದ ಲೂಪ್ ಲೈನ್‌ಗೆ ಕರೆದೊಯ್ಯಿತು.
ಅದು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಲವು ಕೋಚ್‌ಗಳು ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಓಡುತ್ತಿದ್ದ ಡೌನ್ ಲೈನ್ ಗೆ ಉರುಳಿ ಡಿಕ್ಕಿ ಹೊಡೆದಿದೆ. ಪ್ರಾಥಮಿಕ ತನಿಖಾ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.