2019ರಲ್ಲಿ ಕರೋನಾ ವೈರಸ್ ವಕ್ಕರಿಸಿತ್ತು. 2020ರಲ್ಲಿ ಭಾರತದಲ್ಲೂ ಮಾರಕ ವೈರಸ್ನ ಅಟ್ಟಹಾಸ ಶುರುವಾಗತ್ತು. ಪರಿಣಾಮ ರಾಷ್ಟ್ರವ್ಯಾಪಿ ಲಾಕ್ಡೌನ್, ಕಾರ್ಪೊರೇಟ್ ಆಫೀಸ್ಗಳಲ್ಲಿ ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಪ್ರಾರಂಭವಾಗಿತ್ತು. ಇಂದಿಗೂ ಅದು ಅವ್ಯಾಹತವಾಗಿ ಮುಂದುವರಿದಿದೆ. ವಾರದಲ್ಲೆರಡು ಬಾರಿ ಕಚೇರಿಗೆ ಹೋದರೂ, ಅಗತ್ಯಕ್ಕೆ ಅನುಗುಣವಾಗಿ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಆರಿಸಿಕೊಳ್ಳುತ್ತಿದ್ದಾರೆ. ಇದನ್ನು ಹೈಬ್ರಿಡ್ ಸಿಸ್ಟಮ್ ಎಂದು ಕರೆಯಲಾಗುತ್ತದೆ.
ಇದು ಅನುಕೂಲಕರವಾಗಿ ಕಂಡರೂ ಸಹ ಆರೋಗ್ಯಕ್ಕೆ ಹಾನಿಕಾರಕ. ಮನೆಯಿಂದ ಕೆಲಸ ಮಾಡುವಾಗ ವಿಭಿನ್ನ ರೀತಿಯ ಕಂಫರ್ಟ್ ಝೋನ್ ಇರುತ್ತದೆ. ಏಕೆಂದರೆ ಹಿರಿಯ ಸಹೋದ್ಯೋಗಿಗಳ ದೃಷ್ಟಿ ನಿಮ್ಮ ಮೇಲಿರುವುದಿಲ್ಲ. ನಿಮ್ಮ ಆಯ್ಕೆಯ ಬಟ್ಟೆಗಳನ್ನು ಧರಿಸಿ ನೀವು ಆರಾಮವಾಗಿ ಕೆಲಸ ಮಾಡಬಹುದು. ಕೆಲವರು ಆರಾಮಕ್ಕೆ ಎಷ್ಟು ಅಡಿಕ್ಟ್ ಆಗುತ್ತಾರೆಂದರೆ ಕುರ್ಚಿ, ಮೇಜು ಬಿಟ್ಟು ಹಾಸಿಗೆಯ ಮೇಲೆ ಕೂತು ಕಚೇರಿ ಕೆಲಸ ಮಾಡಲಾರಂಭಿಸುತ್ತಾರೆ. ಈ ವಿಶ್ರಾಂತಿ ಅಭ್ಯಾಸವು ಆರೋಗ್ಯವನ್ನು ಹಾಳು ಮಾಡುತ್ತದೆ.
ತೂಕ ಹೆಚ್ಚಳ: ವರ್ಕ್ ಫ್ರಮ್ ಹೋಮ್ನಿಂದಾಗಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ಇದರಿಂದಾಗಿ ಅನೇಕ ಜನರು ವೇಗವಾಗಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ, ಅದನ್ನು ಕಡಿಮೆ ಮಾಡುವುದು ಈಗ ತುಂಬಾ ಕಷ್ಟ. ಗಂಟೆಗಟ್ಟಲೆ ಹಾಸಿಗೆಯಲ್ಲಿ ಕುಳಿತು ಅಥವಾ ಮಲಗಿ ಕೆಲಸ ಮಾಡಿದ್ರೆ ಹೊಟ್ಟೆ ಮತ್ತು ಸೊಂಟದ ಸುತ್ತ ಬೊಜ್ಜು ಇನ್ನಷ್ಟು ಹೆಚ್ಚುತ್ತದೆ.
ಸೋಮಾರಿತನ: ಹಾಸಿಗೆಯ ಮೇಲೆ ಕೆಲಸ ಮಾಡುವ ಮೂಲಕ ನೀವು ಯಾವಾಗ ಬೇಕಾದರೂ ಮಲಗುವ ಆಯ್ಕೆಯನ್ನು ಹೊಂದಿರುತ್ತೀರಿ, ವಿಶೇಷವಾಗಿ ಚಳಿಗಾಲದಲ್ಲಿ. ಜನರು ತಮ್ಮ ಪಾದಗಳನ್ನು ಕ್ವಿಲ್ಟ್ ಮತ್ತು ಕಂಬಳಿಗಳಲ್ಲಿ ಮುಚ್ಚಿಕೊಂಡು ಬೆಚ್ಚಗೆ ಕುಳಿತುಬಿಡುತ್ತಾರೆ. ಇದು ನಿದ್ರೆ ಮತ್ತು ಆಲಸ್ಯವನ್ನು ಹೆಚ್ಚಿಸುತ್ತದೆ. ಅಂತಹ ಸೋಮಾರಿತನವು ದೇಹಕ್ಕೆ ಹಾನಿ ಮಾಡುತ್ತದೆ.
ಸೊಂಟ ಮತ್ತು ಬೆನ್ನು ನೋವು: ಬೆಡ್ ಮೇಲೆ ಕೂತು ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುವಾಗ ಸೊಂಟ ಮತ್ತು ಬೆನ್ನಿನ ಸ್ಥಾನ ಸರಿಯಾಗಿಲ್ಲದೇ ಇದ್ದರೆ ನೋವು ಪ್ರಾರಂಭವಾಗುತ್ತದೆ. ಬೆನ್ನು ಮತ್ತು ಸೊಂಟ ನೋವಿನಿಂದ ನೀವು ಬಳಲಬಹುದು. ಹಾಗಾಗಿ ಆದಷ್ಟು ಕುರ್ಚಿ ಮತ್ತು ಟೇಬಲ್ ಅನ್ನು ಬಳಕೆ ಮಾಡಿ.