ಹಿರಿಯ ನಟ ನಾಸಿರುದ್ದೀನ್ ಶಾ ಅವರು ಅದಾ ಶರ್ಮಾ ಅವರ ‘ದಿ ಕೇರಳ ಸ್ಟೋರಿ’ ಸಿನಿಮಾದ ಯಶಸ್ಸನ್ನು ಅಪಾಯಕಾರಿ ಪ್ರವೃತ್ತಿ ಎಂದು ಕರೆದಿದ್ದಾರೆ. ಈ ಚಲನಚಿತ್ರವನ್ನು ನಾನು ವೀಕ್ಷಿಸಲು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೇರಳ ಸ್ಟೋರಿಯು 2023 ರ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದು 200 ಕೋಟಿ ರೂ. ಬಾಚುವ ಮೂಲಕ ಬಾಕ್ಸ್ ಆಫೀಸ್ ಕಲೆಕ್ಷನ್ ಉಡೀಸ್ ಮಾಡಿದೆ. ಇದೀಗ ಸುದೀಪ್ತೋ ಸೇನ್ ಅವರ ಈ ವಿವಾದಾತ್ಮಕ ಚಲನಚಿತ್ರದ ಬಗ್ಗೆ ಹಿರಿಯ ನಟ ನಾಸಿರುದ್ದೀನ್ ಶಾ ಕಟುವಾಗಿ ಟೀಕಿಸಿದ್ದಾರೆ.
ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ, ಕೇರಳ ಸ್ಟೋರಿಯ ಯಶಸ್ಸನ್ನು ಅಪಾಯಕಾರಿ ಪ್ರವೃತ್ತಿ ಎಂದು ಕರೆದ ಅವರು ಅದನ್ನು ಜರ್ಮನಿಯ ನಾಜಿಗೆ ಹೋಲಿಸಿದರು. ನಾಜಿ ಜರ್ಮನಿಯ ಹಾದಿಯಲ್ಲಿ ಸಾಗುತ್ತಿರುವಂತೆ ತೋರುತ್ತಿದೆ ಎಂದು ಟೀಕಿಸಿದ್ರು.
ಈ ದ್ವೇಷದ ವಾತಾವರಣವು ನಿಧಾನವಾಗಿ ಕಣ್ಮರೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನೀವು ಎಷ್ಟು ದಿನ ದ್ವೇಷವನ್ನು ಹರಡಬಹುದು? ಅದು ನಮ್ಮೆಲ್ಲರನ್ನು ಹಠಾತ್ತನೆ ಆವರಿಸಿರುವ ರೀತಿಯಲ್ಲಿ ಅದು ಕಣ್ಮರೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ರು.
ಕೆಲವು ದಿನಗಳ ಹಿಂದಷ್ಟೇ, ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಕೂಡ ಕೇರಳ ಸ್ಟೋರಿಯನ್ನು ತೀವ್ರವಾಗಿ ಖಂಡಿಸಿದ್ದರು. ಬಾಲಿವುಡ್ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಕೂಡ ಸಿನಿಮಾವನ್ನು ಟೀಕಿಸಿದ್ದರು.
ಏನಿದು ಕೇರಳ ಸ್ಟೋರಿ ವಿವಾದ
ಲವ್ ಜಿಹಾದ್ ಮೂಲಕ ಕೇರಳದ ಮಹಿಳೆಯರನ್ನು ಹೇಗೆ ಬಲವಂತವಾಗಿ ಮೋಸಗೊಳಿಸಲಾಯಿತು. ಗರ್ಭಧಾರಣೆ ಮತ್ತು ಐಸಿಸ್‌ಗೆ ಸೇರಲು ಇರಾಕ್ ಮತ್ತು ಸಿರಿಯಾಕ್ಕೆ ಕಳ್ಳಸಾಗಣೆ ಮಾಡಲಾಯಿತು ಎಂಬುದನ್ನು ಚಿತ್ರವು ತೋರಿಸುತ್ತದೆ.
ಸಿನಿಮಾದ ಟ್ರೇಲರ್ ಬಿಡುಗಡೆಯಾದಾಗಿನಿಂದ ಈ ಚಿತ್ರವು ವಿವಾದಗಳ ಕೇಂದ್ರಬಿಂದುವಾಗಿದೆ. ಈ ಚಿತ್ರವನ್ನು ದೇಶದಲ್ಲಿ ದ್ವೇಷವನ್ನು ಹರಡುವ ಗುರಿಯನ್ನು ಹೊಂದಿದೆ ಎಂದು ಹಲವಾರು ರಾಜಕಾರಣಿಗಳು ಆರೋಪಿಸಿದ್ದಾರೆ. ಸುದೀಪ್ತೋ ಸೇನ್ ನಿರ್ದೇಶನದ ಈ ಚಿತ್ರದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಮೇ 5 ರಂದು ಬಿಡುಗಡೆಯಾಯಿತು.