ದೇಶದ ಸುಮಾರು 150 ವೈದ್ಯಕೀಯ ಕಾಲೇಜುಗಳು ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ವೃತ್ತಿಪರರ ನಿಯಂತ್ರಕ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾನ್ಯತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಅಧ್ಯಾಪಕರ ಕೊರತೆ ಮತ್ತು ನಿಯಮಗಳ ಉಲ್ಲಂಘನೆಗಾಗಿ ಈಗಾಗಲೇ 40 ವೈದ್ಯಕೀಯ ಕಾಲೇಜುಗಳು ಮಾನ್ಯತೆ ಕಳೆದುಕೊಂಡಿದ್ದು, ನಿಗದಿತ ಮಾನದಂಡಗಳನ್ನು ಅನುಸರಿಸುತ್ತಿರುವ ಬಗ್ಗೆ ಎನ್‌ಎಂಸಿಗೆ ತೋರಿಸಬೇಕು.
NMC ಮಾನ್ಯತೆ ರದ್ದು ಆಗಲಿರುವ ಕಾಲೇಜುಗಳ ಪಟ್ಟಿಯಲ್ಲಿ ಗುಜರಾತ್, ಅಸ್ಸಾಂ, ಪುದುಚೇರಿ, ತಮಿಳುನಾಡು, ಪಂಜಾಬ್, ಆಂಧ್ರಪ್ರದೇಶ, ತ್ರಿಪುರ ಮತ್ತು ಪಶ್ಚಿಮ ಬಂಗಾಳದ ವೈದ್ಯಕೀಯ ಕಾಲೇಜುಗಳಿವೆ.
ಆಯೋಗದ ಪದವಿಪೂರ್ವ ವೈದ್ಯಕೀಯ ಶಿಕ್ಷಣ ಮಂಡಳಿಯು ಒಂದು ತಿಂಗಳ ಕಾಲ ನಡೆಸಿದ ತಪಾಸಣೆಯಲ್ಲಿ ಸಿಸಿ ಟಿವಿ ಕ್ಯಾಮೆರಾಗಳ ಅಸಮರ್ಪಕ ನಿರ್ವಹಣೆ, ಬಯೋಮೆಟ್ರಿಕ್ ಹಾಜರಾತಿ ಕಾರ್ಯವಿಧಾನಗಳಲ್ಲಿನ ಲೋಪಗಳು ಮತ್ತು ಅಧ್ಯಾಪಕರ ಪಟ್ಟಿಗಳನ್ನು ಪರಿಶೀಲಿಸಿದಾಗ ನ್ಯೂನ್ಯತೆಗಳು ಬಹಿರಂಗಗೊಂಡಿವೆ.
ಸರಿಯಾದ ಕ್ಯಾಮೆರಾ ಅಳವಡಿಕೆ, ಅವುಗಳ ಕಾರ್ಯವೈಖರಿ ಸೇರಿದಂತೆ ವೈದ್ಯಕೀಯ ಕಾಲೇಜು ನಡೆಸಲು ಕಾಲೇಜುಗಳು ಮಾನದಂಡ ಅನುಸರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ವೈದ್ಯಕೀಯ ಕಾಲೇಜುಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಮೂಲಗಳು ಹೇಳಿವೆ. ಮೊದಲ ಮನವಿಯನ್ನು 30 ದಿನಗಳಲ್ಲಿ NMC ನಲ್ಲಿ ಮಾಡಬಹುದು. ಮನವಿ ತಿರಸ್ಕೃತಗೊಂಡರೆ ಕೇಂದ್ರ ಆರೋಗ್ಯ ಸಚಿವಾಲಯವನ್ನು ಸಂಪರ್ಕಿಸಬಹುದು.