ಬೆಂಗಳೂರು: ಬೇಸಿಗೆ ರಜೆ ಮುಕ್ತಾಯವಾಗಿದ್ದು, ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಆರಂಭವಾಗಲಿವೆ.
2023 -24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಇಂದಿನಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಿರಲಿದ್ದು, ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಈಗಾಗಲೇ ಶಾಲೆ ಪ್ರಾರಂಭೋತ್ಸವಕ್ಕೆ ಎಲ್ಲಾ ಶಾಲೆಗಳಲ್ಲಿಯೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರ ಮತ್ತು ಮಂಗಳವಾರ ಶಾಲೆಯ ಕೊಠಡಿ, ಶೌಚಾಲಯ, ಕಾಂಪೌಂಡ್, ಆವರಣ ಎಲ್ಲವನ್ನು ಹಿರಿಯ ವಿದ್ಯಾರ್ಥಿಗಳು ಹಾಗೂ ಸಹಾಯಕರೊಂದಿಗೆ ಶಿಕ್ಷಕರು ಸ್ವಚ್ಛಗೊಳಿಸಿ ಮೊದಲ ದಿನ ಮಕ್ಕಳನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ಮೊದಲ ದಿನ ಬಿಸಿಯೂಟದಲ್ಲಿ ಸಿಹಿ ವಿತರಿಸಬೇಕು. ಒಂದೆರಡು ಗಂಟೆ ನಂತರ ಶೈಕ್ಷಣಿಕ ತರಗತಿ ಚಟುವಟಿಕೆ ಆರಂಭಿಸಬೇಕೆಂದು ತಿಳಿಸಲಾಗಿದೆ. ಮಳೆಯಿಂದಾಗಿ ಮಕ್ಕಳು ಶಾಲೆಗೆ ಬರಲಾಗದಿದ್ದರೆ ರಜೆ ಘೋಷಿಸಲು ಸೂಚಿಸಲಾಗಿದೆ.