![](https://kannadadunia.com/wp-content/uploads/2023/05/1a3865f3-b688-43c7-906b-374287889589.jpg)
ವಾಹನಗಳಿಗೆ ತಮ್ಮಿಚ್ಛೆಯ ಮಾರ್ಪಾಡುಗಳನ್ನು ಮಾಡಿಸಿಕೊಳ್ಳುವುದು ಉಪಖಂಡದಲ್ಲಿ ಭಾರೀ ವೈರಲ್ ಟ್ರೆಂಡ್. ಕೆಲವೊಮ್ಮೆ ಈ ಮಾರ್ಪಾಡುಗಳು ತೀರಾ ವೈಚಿತ್ರಾವತಾರಗಳನ್ನು ಪಡೆದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತವೆ.
ಸುಗಮ ಸಂಚಾರಕ್ಕೆ ಧಕ್ಕೆಯಾಗಬಲ್ಲ ಮಟ್ಟದಲ್ಲಿ ವಾಹನಗಳಿಗೆ ಮಾರ್ಪಾಡು ಮಾಡಿಕೊಂಡಲ್ಲಿ ಅದಕ್ಕೆ ದಂಡ ವಿಧಿಸುವ ಅನೇಕ ಕಾಯಿದೆಗಳಿದ್ದರೂ ಸಹ ಚಿತ್ರವಿಚಿತ್ರ ಮಾರ್ಪಾಡುಗಳನ್ನು ನಾವು ದಿನಂಪ್ರತಿ ನೋಡುತ್ತಲೇ ಇರುತ್ತೇವೆ.
ಟ್ರ‍್ಯಾಕ್ಟರ್ ಒಂದಕ್ಕೆ 52 ಸ್ಪೀಕರ್‌ಗಳನ್ನು, 10-12 ಅಡಿ ಎತ್ತರದವರೆಗೂ ಹಾಕಿಕೊಂಡು ವಿಪರೀತ ಶಬ್ದದ ಮೂಲಕ ಇತರೆ ಸಂಚಾರಿಗಳಿಗೆ ಕಿರಿಕಿರಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಡಿದ ಪಂಜಾಪ್ ಪೊಲೀಸರು ಆತನಿಗೆ ದಂಡ ವಿಧಿಸಿದ್ದಾರೆ. ದೊಡ್ಡ ಟ್ರಕ್‌ಗಳಿಗಿಂತಲೂ ಹಲವು ಪಟ್ಟು ಹೆಚ್ಚಿನ ಶಬ್ದ ಮಾಡುತ್ತಾ ಸಾಗಿದ್ದ ಈ ಟ್ರ‍್ಯಾಕ್ಟರ್ ಪಂಜಾಬ್‌ನ ಖನ್ನಾ ಗ್ರಾಮದಲ್ಲಿ ಚಲಿಸುತ್ತಿತ್ತು.
ಇನ್ಸ್‌ಸ್ಟಾಗ್ರಾಂನಲ್ಲಿ ಇನ್‌ಫ್ಲುಯೆನ್ಸರ್ ಆಗಿರುವ ಯುವಕನೊಬ್ಬ ಈ ರೀತಿಯ ಮಾರ್ಪಾಡು ಮಾಡಿಕೊಂಡು ಟ್ರ‍್ಯಾಕ್ಟರ್‌ನಲ್ಲಿ ಭಾರೀ ಗದ್ದಲದ ಮ್ಯೂಸಿಕ್ ಹಾಕಿಕೊಂಡು ತಿರುಗಾಡುತ್ತಿದ್ದ. ಇದರಿಂದಾಗಿ ಸುತ್ತಲಿನ ಶಾಲೆಗಳು, ಕಾಲೇಜುಗಳು ಹಾಗೂ ಆಸ್ಪತ್ರೆಗಳಲ್ಲಿರುವವರಿಗೆ ತೀವ್ರ ಕಿರಿಕಿರಿಯಾಗುತ್ತಿತ್ತು.
ಅಲ್ಲದೇ ಭಾರತದಲ್ಲಿ ಬ್ಯಾನ್ ಆಗಿರುವ ಏರ್ ಹಾರ್ನ್‌ಅನ್ನೂ ಈತ ಟ್ರ‍್ಯಾಕ್ಟರ್‌ಗೆ ಅಳವಡಿಸಿದ್ದ. ಈ ಹಿಂದೆ ಸಹ ಈತನನ್ನು ಹಿಡಿದು ಅನೇಕ ಬಾರಿ ವಾರ್ನಿಂಗ್ ಕೊಟ್ಟಿದ್ದರೂ ಸಹ ತನ್ನ ಚಾಳಿ ಬಿಡದೇ ಇದ್ದ ಕಾರಣ ಈ ಬಾರಿ ಟ್ರ‍್ಯಾಕ್ಟರ್‌ಅನ್ನು ಕಸ್ಟಡಿಗೆ ತೆಗೆದುಕೊಂಡ ಪೊಲೀಸರು 1.50 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಈ ಟ್ರ‍್ಯಾಕ್ಟರ್‌ಗೆ ವಿಮೆ, ನೋಂದಣಿ ಪ್ರಮಾಣ ಪತ್ರ ಹಾಗೂ ಮಾಲಿನ್ಯ ಪ್ರಮಾಣ ಪತ್ರಗಳೂ ಸಹ ಇರಲಿಲ್ಲ.