ಬೆಂಗಳೂರು: ಮುಂದಿನ 8 ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಆಗಮನವಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಾರಿ ನೈರುತ್ಯ ಮುಂಗಾರು ಮಾರುತಗಳು ಜೂನ್ 6 ಅಥವಾ 7ರಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ.
ವಾಡಿಕೆಯಂತೆ ಜೂನ್ 1 ಅಥವಾ 2 ರಂದು ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶಿಸುತ್ತವೆ. ಅದಾಗಿ ಮೂರ್ನಾಲ್ಕು ದಿನಗಳಲ್ಲಿ ರಾಜ್ಯಕ್ಕೆ ಪ್ರವೇಶಿಸಲಿದೆ. ಈ ಬಾರಿ ಮುಂಗಾರು ಪೂರ್ವದಲ್ಲಿ ಉಂಟಾದ ತೇವಾಂಶ ಕೊರತೆ, ಗಾಳಿಯ ವೇಗ ಕಡಿಮೆಯಾಗಿರುವುದು, ಮೋಕಾ ಚಂಡಮಾರುತದ ಪ್ರಭಾವದಿಂದ ತೇವಾಂಶ ಭರಿತ ಮೋಡಗಳ ಸೆಳೆತ ಮೊದಲಾದ ಕಾರಣಗಳಿಂದ ಮಾರುತಗಳ ಮೇಲೆ ಪರಿಣಾಮ ಉಂಟಾಗಿದೆ.
ಸೋಮವಾರ ಬಂಗಾಳಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಮುಂಗಾರು ಪೂರಕ ಹವಾಗುಣ ಸೃಷ್ಟಿಯಾಗಿದೆ. ಜೂನ್ 4 ಇಲ್ಲವೇ 5ರ ವೇಳೆಗೆ ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶಿಸಲಿದ್ದು, ಮಾರುತಗಳು ಪ್ರಬಲವಾದಲ್ಲಿ ಒಂದೆರಡು ದಿನಗಳಲ್ಲೇ ರಾಜ್ಯಕ್ಕೆ ಎಂಟ್ರಿ ಕೊಡಲಿವೆ.
ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈಸುಳಿಗಾಳಿ ಉಂಟಾದ ಪರಿಣಾಮ ಮುಂದಿನ ಐದು ದಿನಗಳ ಕಾಲ ಗುಡುಗು ಮಿಂಚು ಸಹಿತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.