2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗ್ಲೇ ನಿರ್ಧರಿಸಿದೆ. ಸಾರ್ವಕನಿಕರು ಕೂಡ ತಮ್ಮ ಬಳಿಯಿರುವ 2000 ರೂಪಾಯಿ ನೋಟನ್ನು ಬದಲಾಯಿಸಲು ಅಥವಾ ಅದನ್ನು ಖಾತೆಗೆ ಜಮಾ ಮಾಡಲು ಬ್ಯಾಂಕ್ಗಳಿಗೆ ತೆರಳುತ್ತಿದ್ದಾರೆ. ನಿಯಮದ ಪ್ರಕಾರ ನೀವು ಗರಿಷ್ಠ 10 ನೋಟುಗಳನ್ನು ಬದಲಾಯಿಸಬಹುದು. ನಿಮ್ಮ ಬಳಿಯೇನಾದರೂ 2000 ಮುಖಬೆಲೆಯ ಅಧಿಕ ನೋಟುಗಳಿದ್ದರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರಬಹುದೇ ಎಂಬುದನ್ನು ತಿಳಿದುಕೊಳ್ಳೋಣ.
ಆರ್ಬಿಐ ನೀಡಿರುವ ಮಿತಿಯಲ್ಲಿ ಯಾವುದೇ ವಹಿವಾಟು ನಡೆದರೆ ಆದಾಯ ತೆರಿಗೆ ಇಲಾಖೆಯ ಸೂಚನೆ ಬರುವುದಿಲ್ಲ. ಮತ್ತೊಂದೆಡೆ, ಬ್ಯಾಂಕ್ ಖಾತೆಯಲ್ಲಿ ಹೆಚ್ಚಿನ ವಹಿವಾಟು ನಡೆದರೆ ಆದಾಯ ತೆರಿಗೆ ಇಲಾಖೆಯಿಂದ ಪ್ರಶ್ನೆಗಳನ್ನು ಕೇಳಬಹುದು. ತೆರಿಗೆ ತಜ್ಞರ ಪ್ರಕಾರ, ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಯಲ್ಲಿ ದೊಡ್ಡ ಮೊತ್ತವನ್ನು ಠೇವಣಿ ಮಾಡಿದರೆ, ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಗಳು ಉದ್ಭವಿಸಬಹುದು.ಉಳಿತಾಯ ಖಾತೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ, ಆದಾಯ ತೆರಿಗೆ ಇಲಾಖೆಯು ಈ ವಹಿವಾಟಿನ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು.
ಖಾತೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣವನ್ನು ಠೇವಣಿ ಮಾಡಿದರೆ, ಅದನ್ನು ಹಣಕಾಸು ವಹಿವಾಟಿನ ಹೇಳಿಕೆಯಲ್ಲಿ (SFT) ವರದಿ ಮಾಡಲಾಗುತ್ತದೆ. ಇದಲ್ಲದೇ, ಚಾಲ್ತಿ ಬ್ಯಾಂಕ್ ಖಾತೆಯಲ್ಲಿ 50 ಲಕ್ಷಕ್ಕಿಂತ ಹೆಚ್ಚು ಹಣವನ್ನು ಠೇವಣಿ ಮಾಡಿದಾಗ ಎಸ್ಎಫ್ಟಿಯಲ್ಲಿ ವರದಿ ಮಾಡಲಾಗುತ್ತದೆ.ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದರೆ ಗಾಬರಿ ಪಡುವ ಅಗತ್ಯವಿಲ್ಲ. ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂಬುದು ಇದರ ಅರ್ಥವಲ್ಲ.
ಈ ಹಣ ಎಲ್ಲಿಂದ ಬಂತು ಎಂದು ಆದಾಯ ತೆರಿಗೆ ಇಲಾಖೆ ಕೇಳುತ್ತದೆ. ನಂತರ ನೀವು ಅದರ ಬಗ್ಗೆ ಎಲ್ಲಾ ಸರಿಯಾದ ಮಾಹಿತಿಯನ್ನು ನೀಡಬೇಕು ಮತ್ತು ಹಣದ ಮೂಲವನ್ನು ಹೇಳಬೇಕಾಗುತ್ತದೆ. ಆದರೆ, ಹಣದ ಮೂಲವನ್ನು ಬಹಿರಂಗಪಡಿಸದಿದ್ದರೆ ಕ್ರಮ ಕೈಗೊಳ್ಳಬಹುದು.