ಹೊಸ ಸಂಸತ್ ಭವನದಲ್ಲಿ ಸ್ಥಾಪಿಸಲಾದ ಸೆಂಗೋಲ್ ಮೊದಲ ದಿನವೇ ಬಾಗಿದೆ ಎಂದು ಕುಸ್ತಿಪಟುಗಳ ಬಂಧನವನ್ನ ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿರುವುದಕ್ಕೆ ಕಿಡಿಕಾರಿದ ಅವರು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.
ಹೊಸ ಸಂಸತ್ ಭವನದತ್ತ ತೆರಳ್ತಿದ್ದ ಕುಸ್ತಿಪಟುಗಳನ್ನ ಎಳೆದೊಯ್ದು ಪೊಲೀಸರು ವಶಕ್ಕೆ ಪಡೆದಿದ್ದು ಖಂಡನೀಯ. ಮೊದಲ ದಿನವೇ ಸೆಂಗೋಲ್ ಬಾಗಿದ್ದನ್ನು ಇದು ತೋರಿಸುತ್ತದೆ. ಪ್ರತಿಪಕ್ಷಗಳ ಬಹಿಷ್ಕಾರದ ನಡುವೆ ರಾಷ್ಟ್ರಪತಿಯನ್ನು ಹೊಸ ಸಂಸತ್ ಭವನ ಉದ್ಘಾಟನೆಯಿಂದ ಹೊರಗಿಟ್ಟ ದಿನದಂದು ಇಂತಹ ದೌರ್ಜನ್ಯ ನಡೆಯುವುದು ನ್ಯಾಯವೇ ? ಎಂದು ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಯೋಜಿತ ಮಹಿಳಾ ‘ಮಹಾಪಂಚಾಯತ್’ಗಾಗಿ ಹೊಸ ಸಂಸತ್ ಭವನದತ್ತ ತೆರಳಲು ಪ್ರಯತ್ನಿಸುತ್ತಿದ್ದಾಗ ದೆಹಲಿ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರನ್ನು ಬಂಧಿಸಿದರು.
ಚಾಂಪಿಯನ್ ಕುಸ್ತಿಪಟುಗಳು ಏಪ್ರಿಲ್ 23 ರಂದು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಅವರನ್ನ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.