ತಮಿಳುನಾಡಿನ ಪ್ರಖ್ಯಾತ ಚಿದಂಬರಂ ನಟರಾಜ ಸ್ವಾಮಿ ದೇಗುಲದಲ್ಲಿ ಬಾಲ್ಯ ವಿವಾಹ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬಾಲ್ಯವಿವಾಹ ನಡೆದಿದೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಾಗಲೇ ದೀಕ್ಷಿತರ ಪರ ವಕೀಲ ಜಿ ಚಂದ್ರಶೇಖರ್ ಅವರು ಸುಮೋಟೋ ಕೇಸ್ ದಾಖಲಿಸಿಕೊಂಡು ಘಟನೆಯ ತನಿಖೆಗೆ ಆದೇಶಿಸುವಂತೆ ಹೈಕೋರ್ಟ್‌ಗೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಚಂದ್ರಶೇಖರ್, ”ದೀಕ್ಷಿತರ ವಿರುದ್ಧ ದಾಖಲಾಗಿರುವ ಬಾಲ್ಯ ವಿವಾಹ ಪ್ರಕರಣಗಳು ಮತ್ತು ನಂತರದ ಬಂಧನಗಳ ಬಗ್ಗೆ ಸರಕಾರದಿಂದ ಮಾಹಿತಿ ಹಂಚಿಕೊಳ್ಳಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ತನ್ನ ತನಿಖೆಯ ವಿವರಗಳನ್ನು ಬಹಿರಂಗಪಡಿಸಿದ್ದು, ನಾವೂ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೇವೆ. ಆದರೆ ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದ ಕೆಲವು ವಿವರಗಳನ್ನು ಬಹಿರಂಗಪಡಿಸುವುದು ಅನುಚಿತವಾಗಿದೆ. ಅವರ ಭಾವಚಿತ್ರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದನ್ನು ತಪ್ಪಿಸಬೇಕು. ಬಾಲಕಿಯರ ವೈದ್ಯಕೀಯ ಪರೀಕ್ಷೆಯ ವಿವರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದನ್ನು ತಡೆಯಲು ನನ್ನ ಮನವಿಯ ಹೊರತಾಗಿಯೂ ಕೆಲವು ವ್ಯಕ್ತಿಗಳು ಅದನ್ನು ಮಾಡುತ್ತಿದ್ದಾರೆ” ಎಂದು ಹೇಳಿದರು.
ಚಂದ್ರಶೇಖರ್ ಅವರು ಅಕ್ಟೋಬರ್ 2022 ರಿಂದ ಈ ವಿಷಯದ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆಗೆ ಕೋರಿದ್ದಾರೆ ಎಂದು ಹೇಳಿದರು. “ಇದು ಮಾನವ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ಒಳಗೊಂಡಿರುವುದರಿಂದ ನಾವು ನ್ಯಾಯಾಂಗ ತನಿಖೆಯನ್ನು ಸಹ ಒತ್ತಾಯಿಸುತ್ತೇವೆ. ತೀರ್ಪಿನಲ್ಲಿಯೂ ಅಪ್ರಾಪ್ತರ ಗುರುತುಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಮಾಹಿತಿಯನ್ನು ಸಾರ್ವಜನಿಕಗೊಳಿಸಲಾಗುತ್ತಿದೆ’ ಎಂದು ಚಂದ್ರಶೇಖರ್ ಹೇಳಿದರು.
ಏತನ್ಮಧ್ಯೆ ಆಪಾದಿತ ಬಾಲ್ಯವಿವಾಹಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಬಂಧಿಸಲಾದ ವ್ಯಕ್ತಿಯ ಸೆಲ್ ಫೋನ್‌ಗಳಿಂದ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಗುಲದಲ್ಲಿ ಬಾಲ್ಯ ವಿವಾಹ ಆರೋಪಕ್ಕೆ ಸಂಬಂಧಿಸಿದಂತೆ ದೀಕ್ಷಿತರ ವಿರುದ್ಧ ನಾಲ್ಕು ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ವರ ಸೇರಿದಂತೆ ಎಂಟು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇದೇ ರೀತಿಯ ಇನ್ನೂ ಆರು ದೂರುಗಳಲ್ಲಿ ತನಿಖೆ ನಡೆಯುತ್ತಿದೆ. ಖ್ಯಾತ ಚಿದಂಬರಂ ನಟರಾಜ ಸ್ವಾಮಿ ದೇಗುಲದಲ್ಲಿ ದೀಕ್ಷಿತರ ಸಮ್ಮುಖದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿರುತ್ತವೆ ಎಂಬ ಆರೋಪ ಸಾಮಾನ್ಯವಾಗಿದೆ.