ಮಧ್ಯ ಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿರುವ ಚೀತಾಗಳನ್ನು ಸಲಹುತ್ತಿರುವ ಹಾಗೂ ಟ್ರ‍್ಯಾಕಿಂಗ್ ಮಾಡುತ್ತಿರುವ ಸಿಬ್ಬಂದಿಯನ್ನು ಡಕಾಯಿತರೆಂದು ತಪ್ಪಾಗಿ ಭಾವಿಸಿದ ಗ್ರಾಮಸ್ಥರ ಗುಂಪೊಂದು ಅವರ ಮೇಲೆ ಹಲ್ಲೆ ಮಾಡಿದೆ.
ಶುಕ್ರವಾರ ಬೆಳಿಗ್ಗೆ ನಡೆದ ಈ ಘಟನೆಯಲ್ಲಿ, ಇಲ್ಲಿನ ಪೊಹಾರಿ ಪ್ರದೇಶದ ಬುರಾಖೇಡಾ ಗ್ರಾಮದಲ್ಲಿ ಚೀತಾ ಟ್ರ‍್ಯಾಕಿಂಗ್ ತಂಡದ ನಾಲ್ವರು ಸಿಬ್ಬಂದಿಯನ್ನು ಡಕಾಯಿತರ ಗುಂಪೆಂದು ತಪ್ಪಾಗಿ ಭಾವಿಸಿದ ಗ್ರಾಮಸ್ಥರು ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಸಂರಕ್ಷಿತ ಪ್ರದೇಶದಿಂದ ಹೊರಗೆ ಹೋಗಿದ್ದ ಆಶಾ ಹೆಸರಿನ ಚೀತಾವನ್ನು ಟ್ರ‍್ಯಾಕ್ ಮಾಡುತ್ತಾ ಸಾಗಿದ ಈ ತಂಡವನ್ನು ಮುಂಜಾನೆ ಬೆಳಗ್ಗಿನ ಜಾವ ನಾಲ್ಕು ಗಂಟೆಯ ವೇಳೆಗೆ ಗ್ರಾಮಸ್ಥರು ಅಡ್ಡ ಹಾಕಿದ್ದಾರೆ. ತಾವು ತಪ್ಪಿಸಿಕೊಂಡಿರುವ ಚೀತಾದ ಪತ್ತೆ ಮಾಡುತ್ತಿರುವುದಾಗಿ ತಂಡದ ಸದಸ್ಯರು ಹೇಳಿದರೂ ಸಹ ಊರಿನ ಜನರು ಅವರನ್ನು ನಂಬಲಿಲ್ಲ.
ಇದಾದ ಬೆನ್ನಿಗೇ ಸ್ಥಳಕ್ಕೆ ಮತ್ತೊಂದು ತಂಡವನ್ನು ಕಳುಹಿಸಲು ಕುನ್ಹೋ ರಾಷ್ಟ್ರೀಯ ಉದ್ಯಾನದ ಆಡಳಿತ ವ್ಯವಸ್ಥೆ ಮಾಡಿದೆ. ಘಟನೆ ಸಂಬಂಧ ಸಮೀಪದ ಪೊಹಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.