ಛತ್ತೀಸ್‌ಗಢ: ಡ್ಯಾಂಗೆ ಬಿದ್ದ ತನ್ನ ಫೋನ್‌ಗಾಗಿ ವ್ಯಕ್ತಿಯೊಬ್ಬರು ಇಡೀ ಅಣೆಕಟ್ಟನ್ನು ಬರಿದಾಗಿಸಿದ ವಿಲಕ್ಷಣ ಪ್ರಕರಣ ಛತ್ತೀಸ್‌ಗಢದಲ್ಲಿ ನಡೆದಿದೆ. ಕಂಕೇರ್ ಜಿಲ್ಲೆಯ ಕೊಯಿಲಿಬೀಡಾದ ಆಹಾರ ಅಧಿಕಾರಿ ರಾಜೇಶ್ ವಿಶ್ವಾಸ್ ಅವರು ಖೇರ್ಕಟ್ಟಾ ಅಣೆಕಟ್ಟಿನಲ್ಲಿ ವಿಹಾರ ಮಾಡ್ತಿದ್ರು. ಈ ವೇಳೆ ಆಕಸ್ಮಿಕವಾಗಿ ತಮ್ಮ ಸ್ಮಾರ್ಟ್‌ಫೋನ್ ಕೆಳಗೆ ಬಿದ್ದಿದೆ. ಅದನ್ನು ಮರಳಿ ಪಡೆಯುವುದಕ್ಕಾಗಿ ಸತತ ಮೂರು ದಿನಗಳವರೆಗೆ ನೀರನ್ನು ಖಾಲಿ ಮಾಡಿದ್ದಾರೆ.
ಅಣೆಕಟ್ಟಿನಿಂದ ಸುಮಾರು 41 ಲಕ್ಷ ಲೀಟರ್ ನೀರು ಹರಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಖಂಜೋರ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರ ವರದಿಯಲ್ಲಿ 4,104 ಕ್ಯೂಬಿಕ್ ಮೀಟರ್ ಅಥವಾ 41 ಲಕ್ಷ ಲೀಟರ್ ನೀರನ್ನು ಅಧಿಕಾರಿಗಳಿಂದ ಅನುಮತಿಯಿಲ್ಲದೆ ಖಾಲಿ ಮಾಡಲಾಗಿದೆ ಎಂದು ಹೇಳಿದೆ.
ಆವರಣದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾಗ ರಾಜೇಶ್ ಅವರ ಫೋನ್ ಕೈಯಿಂದ ಜಾರಿ ನೀರಿಗೆ ಬಿದ್ದಿದೆ. ಮೊಬೈಲ್ ಗಾಗಿ ಡ್ಯಾಂ ನೀರನ್ನು ಖಾಲಿ ಮಾಡಿಸಿದ್ದಾರೆ. ಸೋಮವಾರ ಸಂಜೆಯಿಂದಲೇ ನೀರು ಹರಿಯಲಾರಂಭಿಸಿದ್ದು, ಗುರುವಾರದವರೆಗೆ ನೀರು ಹರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ನೀರು ಹರಿಯದಂತೆ ಸ್ಥಗಿತಗೊಳಿಸಿದ್ದಾರೆ.
ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಮತ್ತು ಸಂಬಂಧಪಟ್ಟ ಅಧಿಕಾರಿಯಿಂದ ಅನುಮತಿ ಪಡೆಯದ ಆರೋಪದ ಮೇಲೆ ಜಿಲ್ಲಾಧಿಕಾರಿ ಪ್ರಿಯಾಂಕಾ ಶುಕ್ಲಾ ಅವರು ರಾಜೇಶ್ ಅವರನ್ನು ಅಮಾನತುಗೊಳಿಸಿದ್ದಾರೆ. ಈ ಸುಡುವ ಬೇಸಿಗೆಯಲ್ಲಿ ಲಕ್ಷಾಂತರ ಲೀಟರ್ ನೀರನ್ನು ಪೋಲು ಮಾಡಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಫೋನ್‌ನಲ್ಲಿ ಸರ್ಕಾರದ ಅತ್ಯಂತ ಅಗತ್ಯವಾಗಿರುವ ಡೇಟಾ ಇದೆ ಎಂದು ರಾಜೇಶ್ ಹೇಳಿದ್ದಾರೆ. ತಾನು ಉಪ ವಿಭಾಗಾಧಿಕಾರಿ (ಎಸ್‌ಡಿಒ) ಗೆ ಕರೆ ಮಾಡಿ ಹತ್ತಿರದ ಕಾಲುವೆಗೆ ಸ್ವಲ್ಪ ನೀರು ಹರಿಸಲು ನನಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇನೆ. ಮೂರರಿಂದ ನಾಲ್ಕು ಅಡಿ ಆಳದ ನೀರನ್ನು ಹರಿಸಿದರೆ ಅದು ಸಮಸ್ಯೆಯಲ್ಲ ಎಂದು ಅವರು ಹೇಳಿದ್ರು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾಗಿ ಹೇಳಿದ್ರು. ಆದರೆ, ರಾಜೇಶ್ ಅವರು ಅನುಮತಿಗಿಂತ ಹೆಚ್ಚು ನೀರು ಹರಿಸಿದ್ದಾರೆ ಎನ್ನಲಾಗಿದೆ.