ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳೂ ಇವೆ. ಅದಕ್ಕಾಗಿಯೇ ಬಹುತೇಕ ಮನೆಗಳಲ್ಲಿ ತುಳಸಿ ಗಿಡವನ್ನು ನೆಡುವುದು ವಾಡಿಕೆ. ತುಳಸಿ ಗಿಡ ಇರುವ ಕಡೆ ಸಕಾರಾತ್ಮಕತೆ ತುಂಬಿರುತ್ತದೆ. ಆ ಮನೆಯಲ್ಲಿ ತಾಯಿ ಲಕ್ಷ್ಮಿ ವಾಸವಾಗಿರುತ್ತಾಳೆ. ಅದಕ್ಕಾಗಿಯೇ ಜನರು ತುಳಸಿ ಗಿಡವನ್ನು ಪೂಜಿಸುತ್ತಾರೆ. ತುಳಸಿಯನ್ನು ಪೂಜಿಸಿದರೆ ಭಗವಾನ್ ವಿಷ್ಣುವೂ ಪ್ರಸನ್ನನಾಗುತ್ತಾನೆ.ಆದರೆ ತುಳಸಿಯನ್ನು ಪೂಜಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಇಲ್ಲವಾದರೆ ಲಾಭದ ಬದಲು ನಷ್ಟವನ್ನೇ ಎದುರಿಸಬೇಕಾಗುತ್ತದೆ.
ತುಳಸಿ ಪೂಜೆಯ ನಿಯಮಗಳು…
– ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ನಂತರ ತುಳಸಿ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ವಿಷ್ಣು ಮತ್ತು ಲಕ್ಷ್ಮಿ ಇಬ್ಬರೂ ಆಶೀರ್ವದಿಸುತ್ತಾರೆ. ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ಎಂದಿಗೂ ನೀರನ್ನು ಅರ್ಪಿಸಬೇಡಿ. ಈ ದಿನಗಳಲ್ಲಿ ತುಳಸಿ ಮಾತೆಯು ವಿಷ್ಣುವಿಗಾಗಿ ಉಪವಾಸವನ್ನು ಆಚರಿಸುತ್ತಾಳೆ. ತುಳಸಿ ಗಿಡಕ್ಕೆ ನೀರು ಕೊಡುವುದರಿಂದ ಉಪವಾಸ ಭಂಗವಾಗುತ್ತದೆ, ತುಳಸಿ ಮಾತೆ ಕೋಪಗೊಳ್ಳುತ್ತಾಳೆ. ಅಲ್ಲದೆ, ಭಾನುವಾರ ಮತ್ತು ಏಕಾದಶಿಯಂದು ತುಳಸಿ ಎಲೆಗಳನ್ನು ಕೀಳಬೇಡಿ ಅಥವಾ ತುಳಸಿ ಗಿಡವನ್ನು ಮುಟ್ಟಬೇಡಿ.
– ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಸಮಯದಲ್ಲಿ ತುಳಸಿ ಗಿಡವನ್ನು ಮುಟ್ಟಬೇಡಿ. ಈ ಸಮಯದಲ್ಲಿ ನೀರು ಹಾಕಬೇಡಿ, ಪೂಜೆ ಮಾಡಬೇಡಿ. ಆಹಾರ ಮತ್ತು ನೀರಿನಲ್ಲಿ ಹಾಕಿಡಲು ಗ್ರಹಣ ಕಾಲಕ್ಕೂ ಮೊದಲೇ ತುಳಸಿ ಎಲೆಗಳನ್ನು ಕಿತ್ತು ಇರಿಸಿಕೊಳ್ಳಿ.
– ಸ್ನಾನ ಮಾಡದೆ ತುಳಸಿಗೆ ನೀರು ಹಾಕಬಾರದು, ತುಳಸಿ ಗಿಡವನ್ನು ಮುಟ್ಟಬಾರದು. ಕೊಳಕು ಕೈಗಳಿಂದ ತುಳಸಿ ಗಿಡವನ್ನು ಮುಟ್ಟುವುದು, ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸಿ ಸ್ಪರ್ಷಿಸುವುದು ಮಹಾಪಾಪ.
– ತುಳಸಿ ಗಿಡದ ಎಲೆಗಳನ್ನು ಅನಗತ್ಯವಾಗಿ ಕೀಳಬಾರದು. ಹೀಗೆ ಮಾಡುವುದರಿಂದ ದುರಾದೃಷ್ಟ ಬೆನ್ನಟ್ಟುತ್ತದೆ. ಅಗತ್ಯವಿದ್ದಾಗ ಬೇಕಾದಷ್ಟೇ ಎಲೆಗಳನ್ನು ಕೀಳಬೇಕು.
– ತುಳಸಿ ಗಿಡಕ್ಕೆ ನೀರು ಅರ್ಪಿಸುವಾಗ ‘ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ’. ಆಧಿ ವ್ಯಾಧಿ ಹರ ನಿತ್ಯಂ, ತುಲಸೀ ತ್ವಂ ನಮೋಸ್ತುತೇʼ ಎಂಬ ಮಂತ್ರವನ್ನು ಉಚ್ಚರಿಸಬೇಕು. ಇದು ಪೂಜೆಯ ಸಂಪೂರ್ಣ ಫಲವನ್ನು ನೀಡುತ್ತದೆ. ತುಳಸಿಯನ್ನು ಪೂಜಿಸುವಾಗ ಮಹಿಳೆಯರು ಕೂದಲನ್ನು ಬಿಚ್ಚಿಕೊಂಡಿರಬಾರದು.