ಬೆಂಗಳೂರು: ನೂತನ ಸಂಸತ್ ಭವನ ಉದ್ಘಾಟನೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಗುರುವಾರ ನಡೆದ ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ನೂತನ ಸಂಸತ್ ಭವನ ದೇಶದ ಆಸ್ತಿಯಾಗಿದೆ. ಅದು ಯಾರೊಬ್ಬರ ವೈಯಕ್ತಿಕ ವಿಷಯವಲ್ಲ, ಬಿಜೆಪಿ. ಆರ್.ಎಸ್.ಎಸ್. ಕಚೇರಿಯಲ್ಲ, ಅದು ದೇಶದ ಆಸ್ತಿಯಾಗಿದ್ದು, ಸಂಸತ್ ಭವನ ಉದ್ಘಾಟನೆಗೆ ನಾನು ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ದೇಶದ ಜನರ ತೆರಿಗೆಯ ಹಣದಿಂದ ಸಂಸತ್ ಭವನ ನಿರ್ಮಿಸಲಾಗಿದೆ. ಪ್ರಧಾನಿ ಮೋದಿ ಅವರು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಅದು ಪ್ರಧಾನಿಯವರ ವೈಯಕ್ತಿಕ ಕಾರ್ಯಕ್ರಮವಲ್ಲ, ದೇಶದ ಕಾರ್ಯಕ್ರಮವಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ನಾನು ಕೆಲಸ ಮಾಡಿದ್ದು, ಈಗಲೂ ರಾಜ್ಯಸಭೆ ಸದಸ್ಯನಾಗಿದ್ದೇನೆ. ಬಿಜೆಪಿ ವಿರೋಧಿಸಲು ನನಗೆ ಅನೇಕ ಕಾರಣಗಳಿವೆ. ಆದರೆ, ಸಂಸತ್ ಭವನ ವಿಚಾರದಲ್ಲಿ ರಾಜಕೀಯ ಮಾಡುವುದರಲ್ಲಿ ನನಗೆ ಇಷ್ಟವಿಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ.