ಪಾಟ್ನಾ: ಕಾರ್ ಲೋನ್ ಗಳಿಗೆ ಸರಿಯಾದ ಸಮಯಕ್ಕೆ ಇಎಂಐ ಪಾವತಿಸಲು ಸಾಧ್ಯವಾಗದ ಗ್ರಾಹಕರ ವಾಹನಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ರಿಕವರಿ ಏಜೆಂಟ್‌ಗಳ ಸೇವೆಯನ್ನು ಬಳಸುವ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳನ್ನು ಪಾಟ್ನಾ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ತಪ್ಪಿತಸ್ಥ ಬ್ಯಾಂಕ್ ಗಳು ಮತ್ತು ಹಣಕಾಸು ಕಂಪನಿಗಳಿಗೆ ತಲಾ 50,000 ರೂಪಾಯಿ ದಂಡವನ್ನೂ ಹೈಕೋರ್ಟ್ ವಿಧಿಸಿದೆ.
ನ್ಯಾಯಮೂರ್ತಿ ರಾಜೀವ್ ರಂಜನ್ ಪ್ರಸಾದ್, ಮೇ 19 ರಂದು ನೀಡಿದ ತೀರ್ಪಿನಲ್ಲಿ ರಿಕವರಿ ಏಜೆಂಟ್‌ಗಳು ವಾಹನಗಳನ್ನು ವಶಪಡಿಸಿಕೊಳ್ಳುವುದು ಕಾನೂನುಬಾಹಿರ ಮತ್ತು ಜೀವನ ಮತ್ತು ಜೀವನೋಪಾಯದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ರಿಟ್ ಅರ್ಜಿಗಳ ಗುಂಪನ್ನು ವಿಲೇವಾರಿ ಮಾಡುವಾಗ ಜಸ್ಟೀಸ್ ಪ್ರಸಾದ್ ಅವರು, ಗ್ರಾಹಕರು ಇಎಂಐ ಪಾವತಿಸಲು ಡೀಫಾಲ್ಟ್ ಮಾಡಿದರೆ ವಾಹನವನ್ನು ವಶಪಡಿಸಿಕೊಳ್ಳಲು ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳು ರಿಕವರಿ ಏಜೆಂಟ್‌ಗಳ ಸೇವೆಗಳನ್ನು ಬಳಸುವಂತಿಲ್ಲ. ಅಂತಹ ರಿಕವರಿ ಏಜೆಂಟ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ವಾಹನ ಸಾಲವನ್ನು ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳು ಸೆಕ್ಯುರಿಟೈಸೇಶನ್‌ನ ನಿಬಂಧನೆಗಳನ್ನು ಅನುಸರಿಸಿ ಮಾತ್ರ ಮರುಪಡೆಯಬೇಕು. ಇದು ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳಿಗೆ ಸುಸ್ತಿ ಸಾಲ ಮರುಪಾವತಿ ಅಧಿಕಾರ ನೀಡುತ್ತದೆ ಎಂದು ಹೇಳಲಾಗಿದೆ. ಇಎಂಐ ಪಾವತಿಸಲು ವಿಫಲವಾಗಿರುವ ಗ್ರಾಹಕರ ವಾಹನಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಐದು ರಿಟ್ ಅರ್ಜಿಗಳನ್ನು ವಿಲೇವಾರಿ ಮಾಡುವಾಗ ಹೈಕೋರ್ಟ್ ಈ ತೀರ್ಪು ನೀಡಿದೆ.