ಭಾರತೀಯ ನೌಕಾಪಡೆ ಹೊಸದೊಂದು ಮೈಲಿಗಲ್ಲು ಸೃಷ್ಟಿಸಿದೆ. MiG-29K ಫೈಟರ್ ಜೆಟ್ ದೇಶೀಯವಾಗಿ ನಿರ್ಮಿಸಲಾದ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ನಲ್ಲಿ ರಾತ್ರಿ ವೇಳೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ.
ಈ ಮೂಲಕ ಭಾರತೀಯ ನೌಕಾಪಡೆಯು ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ವರದಿಗಳ ಪ್ರಕಾರ ಭಾರತೀಯ ನೌಕಾಪಡೆಯು ಐಎನ್ಎಸ್ ವಿಕ್ರಾಂತ್ನಲ್ಲಿ ಮಿಗ್-29ಕೆಯ ಮೊದಲ ರಾತ್ರಿ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ನಡೆಸಿತು. ಇದು ಆತ್ಮನಿರ್ಭರ ಭಾರತದ ಪ್ರಗತಿಯನ್ನು ಸೂಚಿಸುತ್ತದೆ ಎಂದು ಭಾರತೀಯ ನೌಕಾಪಡೆ ಹೇಳಿದೆ.
ನೌಕಾಪಡೆಯು ಐಎನ್ಎಸ್ ವಿಕ್ರಾಂತ್ನಲ್ಲಿ ಮಿಗ್-29ಕೆಯ ಮೊದಲ ರಾತ್ರಿ ಲ್ಯಾಂಡಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಯುದ್ಧವಿಮಾನವು ಐಎನ್ಎಸ್ ವಿಕ್ರಾಂತ್ನಲ್ಲಿ ಕತ್ತಲೆ ಸಮಯದಲ್ಲಿ ಇಳಿಯುವುದನ್ನ ಕಾಣಬಹುದು.
ಯಶಸ್ವಿ ರಾತ್ರಿ ಲ್ಯಾಂಡಿಂಗ್ ಕೈಗೊಂಡಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೌಕಾಪಡೆಯನ್ನು ಅಭಿನಂದಿಸಿದರು. ಈ ಗಮನಾರ್ಹ ಸಾಧನೆಯು ವಿಕ್ರಾಂತ್ ಸಿಬ್ಬಂದಿ ಮತ್ತು ನೌಕಾ ಪೈಲಟ್ಗಳ ಕೌಶಲ್ಯ, ಪರಿಶ್ರಮ ಮತ್ತು ವೃತ್ತಿಪರತೆಗೆ ಸಾಕ್ಷಿಯಾಗಿದೆ. ಅವರಿಗೆ ಅಭಿನಂದನೆಗಳು ಎಂದು ಹೇಳಿದರು.
‘ನೈಟ್ ಟ್ರ್ಯಾಪ್’ ಎಂದರೆ ರಾತ್ರಿಯ ಸಮಯದಲ್ಲಿ ವಿಮಾನವಾಹಕ ನೌಕೆಯ ಮೇಲೆ ಫೈಟರ್ ಜೆಟ್ ಇಳಿಯುವುದು. ವಿಮಾನವಾಹಕ ನೌಕೆಯು ಗಂಟೆಗೆ 40-50 ಕಿಮೀ ವೇಗದಲ್ಲಿ ಚಲಿಸುವುದರಿಂದ ಮತ್ತು ಪೈಲಟ್ಗಳು ಜೆಟ್ಗಳ ವೇಗವನ್ನು ವಿಮಾನವಾಹಕಗಳಿಗೆ ಸಂಬಂಧಿಸಿದಂತೆ ಇಟ್ಟುಕೊಳ್ಳಬೇಕಾಗಿರುವುದರಿಂದ ಇದು ಸವಾಲಿನ ಕಾರ್ಯವೆಂದು ಪರಿಗಣಿಸಲಾಗಿದೆ.
ಫೈಟರ್ ಜೆಟ್ಗಳನ್ನು ಸಾಮಾನ್ಯ ರನ್ವೇಯಲ್ಲಿ ಇಳಿಸುವುದು ವಿಮಾನವಾಹಕ ನೌಕೆಯ ಫ್ಲೈಟ್ ಡೆಕ್ನಲ್ಲಿ ಲ್ಯಾಂಡಿಂಗ್ಗೆ ಹೋಲಿಸಿದರೆ ವಿಭಿನ್ನವಾಗಿದೆ.
MiG-29K ಜೆಟ್ ಐಎನ್ಎಸ್ ವಿಕ್ರಾಂತ್ನ ಫೈಟರ್ ಫ್ಲೀಟ್ನ ಭಾಗವಾಗಿದೆ. 20,000 ಕೋಟಿ ರೂ. ವೆಚ್ಚದಲ್ಲಿ 45,000 ಟನ್ ತೂಕದ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ನಿರ್ಮಿಸಲಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕಾರ್ಯಾರಂಭ ಮಾಡಲಾಗಿತ್ತು.