ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ಸ್ನಾನಗೃಹದಲ್ಲಿ ಕುಸಿದುಬಿದ್ದು ಇ0ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದ್ದು ಜೈಲಿನಲ್ಲಿದ್ದಾರೆ. ಕಳೆದೊಂದು ವಾರದಲ್ಲಿ ಎರಡನೇ ಬಾರಿಗೆ ಸತ್ಯೇಂದ್ರ ಜೈನ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾದ ಘಟನೆ ಇದಾಗಿದೆ.
ಸೋಮವಾರ ಜೈಲಿನ ಸ್ನಾನಗೃಹದಲ್ಲಿ ಬಿದ್ದು ಬೆನ್ನುಮೂಳೆಯ ಗಾಯಕ್ಕಾಗಿ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿತ್ತು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ನಿಶ್ಶಕ್ತರಾಗಿ ಕಾಣುವ ಸತ್ಯೇಂದ್ರ ಜೈನ್ ಅವರು ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು ಆಸ್ಪತ್ರೆಯಲ್ಲಿ ಕಾಣಿಸಿಕೊಂಡು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬಂಧನದ ನಂತರ ಸುಮಾರು 35 ಕೆಜಿ ತೂಕವನ್ನು ಕಳೆದುಕೊಂಡಿರುವ ಮಾಜಿ ಸಚಿವ ಸತ್ಯೇಂದ್ರ ಜೈನ್ ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿದ್ದಾರೆ ಮತ್ತು ಮಲಗುವಾಗ ಬೈಪ್ಯಾಪ್ ಯಂತ್ರದ ಅಗತ್ಯವಿದೆ ಎಂದು ಎಎಪಿ ಹೇಳಿದೆ.
ಅದಕ್ಕೂ ಮೊದಲು ಸತ್ಯೇಂದ್ರ ಜೈನ್ ಅವರನ್ನು ಶನಿವಾರದಂದು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಸಿಟಿ ಸ್ಕ್ಯಾನ್ ಮತ್ತು ಎಂಆರ್ಐ ಸೇರಿದಂತೆ ಹಲವಾರು ಪರೀಕ್ಷೆಗಳಿಗೆ ಒಳಪಡಿಸಲಾಯಿತು.
ಆರ್ಥಿಕ ಅಪರಾಧಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಕಳೆದ ವರ್ಷ ಮೇ ತಿಂಗಳಲ್ಲಿ ಶೆಲ್ ಕಂಪನಿಗಳ ಮೂಲಕ ಬಂದ ಅಕ್ರಮ ಹಣದಿಂದ ಭೂಮಿಯನ್ನು ಖರೀದಿಸಿದ ಆರೋಪದ ಮೇಲೆ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿತು. ಆದರೆ ಸತ್ಯೇಂದ್ರ ಜೈನ್ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಇದು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.
ಸತ್ಯೇಂದ್ರ ಜೈನ್ ಅವರು ಕೇಜ್ರಿವಾಲ್ ಅವರ ಸಂಪುಟದ ಪ್ರಮುಖ ಸದಸ್ಯರಾಗಿದ್ದರು ಮತ್ತು ಆರೋಗ್ಯ, ಗೃಹ ಮತ್ತು ನಗರಾಭಿವೃದ್ಧಿ ಸೇರಿದಂತೆ ಹಲವಾರು ಖಾತೆಗಳನ್ನು ಹೊಂದಿದ್ದರು. ಜೈಲಿನಲ್ಲಿರುವಾಗಲೇ ಈ ವರ್ಷದ ಜನವರಿಯಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.