ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರ ಸ್ವೀಕರಿಸುತ್ತಲೇ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿ ಕೊಡುವ ಪ್ಯಾಕೇಜ್ ಅನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಹಾಗೂ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳ ಸಂಘಟನೆ (ಫನಾ) ಸರ್ಕಾರಕ್ಕೆ ವಿನಂತಿಸಿವೆ.
ಖಾಸಗಿ ಆಸ್ಪತ್ರೆಗಳಿಗೆ ತಗುಲುವ ವಾಸ್ತವಿಕ ಚಿಕಿತ್ಸಾ ವೆಚ್ಚಗಳನ್ನು ಪರಿಗಣಿಸಲು ತಜ್ಞರ ಸಮಿತಿ ರಚಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ ಈ ಸಂಘಟನೆಗಳು, ಸಂಪುಟದ ಖಾತೆಗಳ ಹಂಚಿಕೆ ನಿರ್ಧಾರವಾಗುತ್ತಲೇ ಸರ್ಕಾರವನ್ನು ಈ ನಿಟ್ಟಿನಲ್ಲಿ ಸಂಪರ್ಕಿಸುವುದಾಗಿ ತಿಳಿಸಿವೆ.
ಸಹಕಾರೀ ಸಂಘಟನೆಗಳ ಸದಸ್ಯರಿಗೆ ಸುಮಾರು 1,650 ಬಗೆಯ ಚಿಕಿತ್ಸೆಗಳನ್ನು ಸಬ್ಸಿಡಿ ದರಗಳಲ್ಲಿ ಯಶಸ್ವಿನಿ ಯೋಜನೆ ಮೂಲಕ ಕೊಡಮಾಡಲಾಗುತ್ತದೆ. 2018ರಲ್ಲಿ ನಿಲ್ಲಿಸಲಾಗಿದ್ದ ಈ ಯೋಜನೆಯನ್ನು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಮರುಚಾಲನೆಗೊಳಿಸಿತ್ತು.
ಈ ವೇಳೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಲ್ಲಿನ ಪ್ಯಾಕೇಜ್ ದರಗಳನ್ನೇ ಯಶಸ್ವಿನಿ ಯೋಜನೆಗೂ ಅನ್ವಯಿಸಲಾಗಿತ್ತು. ಆದರೆ 2018ರ ವೇಳೆ ಇದ್ದ ದರಗಳಿಗಿಂತ ಹೊಸದಾಗಿ ನಿಗದಿ ಮಾಡಿದ ಬೆಲೆಗಳು ಕಡಿಮೆ ಇದ್ದ ಕಾರಣ ಅನೇಕ ಆಸ್ಪತ್ರೆಗಳು ಈ ಯೋಜನೆಯಡಿ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದವು.
ಇದರ ಬೆನ್ನಿಗೆ, 2018ರ ವೇಳೆ ಇದ್ದ ದರಗಳನ್ನೇ ಸರ್ಕಾರ ಮರು ಅಳವಡಿಕೆ ಮಾಡಿದ್ದ ಕಾರಣ ಯೋಜನೆಗೆ ಇನ್ನಷ್ಟು ಆಸ್ಪತ್ರೆಗಳು ನೋಂದಣಿಗೊಂಡವು. ಸದ್ಯ, ಈ ಯೋಜನೆಯಡಿ 505 ಆಸ್ಪತೆಗಳು ಹಾಗೂ 37.9 ಲಕ್ಷ ಸಹಕಾರ ಸಂಘ ಸದಸ್ಯರು ನೋಂದಣಿಯಾಗಿದ್ದಾರೆ. ಯಶಸ್ವಿನಿ ಯೋಜನೆಯಡಿ 13,800ರಷ್ಟು ಕ್ರಿಯೆಗಳನ್ನು ಮಾಡಲಾಗುತ್ತಿದೆ ಎಂದು ಯಶಸ್ವಿನಿ ಟ್ರಸ್ಟ್ನ ಸಿಇಓ ವೆಂಕಟಸ್ವಾಮಿ ತಿಳಿಸಿದ್ದಾರೆ.
“ಸಿ-ಸೆಕ್ಷನ್ನ ಬೆಲೆ ಈಗ 15,000 ರೂ. ಇದೆ, ಬೆಂಗಳೂರಿನಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಇದಕ್ಕೆ 60,000-1,00,000 ರೂ. ಶುಲ್ಕ ವಿಧಿಸುತ್ತವೆ. ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಕ್ರಿಯೆಗಳನ್ನು ನಡೆಸಲು ಸಾಧ್ಯವಿಲ್ಲದ ಕಾರಣ ಬಹಳಷ್ಟು ಅನಾನುಕೂಲಗಳಾಗಿವೆ. ಹಣದುಬ್ಬರದ ಕಾರಣ ಖಾಸಗಿ ಆಸ್ಪತ್ರೆಗಳು ವಾರ್ಷಿಕ 5-10 ಪ್ರತಿಶತದಷ್ಟು ದರಗಳನ್ನು ಏರಿಕೆ ಮಾಡಬೇಕಾಗಿದೆ. ಆದರೆ ಯಶಸ್ವಿನಿಯಲ್ಲಿ ನಿಗದಿ ಮಾಡಿದ ದರಗಳು ಐದು ವರ್ಷಗಳ ಹಿಂದೆ ಇದ್ದಷ್ಟೇ ಇವೆ,” ಎನ್ನುತ್ತಾರೆ ಐಎಂಎ ರಾಜ್ಯ ಕಾರ್ಯದರ್ಶಿ ಡಾ. ಕರುಣಾಕರ.