ಬೆಂಗಳೂರು: ಕೃಷಿ ಪಂಪ್ ಸೆಟ್ ಗಳಿಗೆ ಹಗಲು ನಿರಂತರ 12 ಗಂಟೆ ವಿದ್ಯುತ್ ಪೂರೈಕೆ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಯೋಜನೆ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸಲು ರೈತ ಮುಖಂಡರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
ಕುರುಬೂರು ಶಾಂತಕುಮಾರ್ ನೇತೃತ್ವದ ರೈತ ಮುಖಂಡರ ನಿಯೋಗ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ರಾತ್ರಿ ವೇಳೆ ಬೆಳೆಗೆ ನೀರು ಹಾಯಿಸಲು ಹೋಗಿ ರೈತರು ಪ್ರಾಣಿಗಳ ದಾಳಿಯಿಂದ ಜೀವ ಕಳೆದುಕೊಳ್ಳುತ್ತಿದ್ದು, ಹಗಲಿನ ವೇಳೆ 12 ಗಂಟೆ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಮನವಿ ಮಾಡಿದ್ದಾರೆ.
ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಬೆಲೆ ಕುಸಿತವಾದಾಗ ಸರ್ಕಾರವೇ ಖರೀದಿಸಬೇಕು ಎಂದು ಕೋರಿದ್ದಾರೆ. ಸರ್ಕಾರದ ಅಂಗಸಂಸ್ಥೆಗಳು, ಆಸ್ಪತ್ರೆ, ಹಾಸ್ಟೆಲ್, ಕಾರಾಗೃಹ, ಅಂಗನವಾಡಿಗಳಿಗೆ ರೈತ ಉತ್ಪಾದಕ ಸಂಸ್ಥೆಗಳ ಮೂಲಕವೇ ಖರೀದಿ ಮಾಡಲು ನಿಯಮ ಜಾರಿಗೆ ತರಲು ಕೋರಲಾಗಿದೆ.